ಉಳ್ಳಾಲ, ಅ.19: ಓವರ್ ಟೇಕ್ ಧಾವಂತದಲ್ಲಿದ್ದ ಪಿಕ್ಅಪ್ ವಾಹನವೊಂದು ಸ್ಕೂಟರೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ರಸ್ತೆಗೆಸೆಯಲ್ಪಟ್ಟ ಸ್ಕೂಟರ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ಬೋಳಿಯಾರ್ ಸಮೀಪದ ಕುರ್ನಾಡು ಬಂಕ್ ಬಳಿ ನಡೆದಿದೆ.
ಉಳ್ಳಾಲ ತಾಲೂಕು ಕಿನ್ಯ ಗ್ರಾಮ ಅರೆಬಿನಗರ, ಉಕ್ಕುಡ ನಿವಾಸಿಗಳಾದ ಮಹಮ್ಮದ್ ಅರ್ಫಾಝ್ ( 23) ಮತ್ತು ಮಹಮ್ಮದ್ ಜುನೈದ್(22) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಸೋಮವಾರ ಸಂಜೆ ಬೋಳಿಯಾರ್ ಕಡೆಯಿಂದ ಮುಡಿಪುಗೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ಪಿಕಪ್ ವಾಹನವು ಡಿಕ್ಕಿ ಹೊಡೆದಿದ್ದು, ಘಟನೆಯ ದೃಶ್ಯವು ಪೆಟ್ರೋಲ್ ಬಂಕಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಪಿಕಪ್ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನವು ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ವಿದ್ಯುತ್ ಕಂಬವೇ ಮುರಿದು ಬಿದ್ದಿದೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡಿದ್ದ ಅರ್ಫಾಝ್ ನನ್ನು ಕೂಡಲೇ ಆಸ್ಪತ್ರೆ ಸಾಗಿಸಿದರೂ ದಾರಿ ಮಧ್ಯೆಯೇ ಆತ ಕೊನೆಯುಸಿರು ಎಳೆದಿದ್ದಾನೆನ್ನಲಾಗಿದೆ. ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಸ್ಕೂಟರ್ ಸವಾರ ಜುನೈದ್ ನನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತನೂ ಮೃತಪಟ್ಟಿದ್ದಾನೆ.

ಪ್ರತೀಕಾರದ ಶಂಕೆ ; ಅಪಘಾತಕ್ಕೂ ಮುನ್ನ ಪಿಕ್ ಅಪ್ ವಾಹನದ ಚಾಲಕ ಮತ್ತು ಸ್ಕೂಟರ್ ಸವಾರರ ಮಧ್ಯೆ ಬೋಳಿಯಾರಿನಲ್ಲಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪಿಕ್ ಅಪ್ ಚಾಲಕನು ಸ್ಕೂಟರ್ ಸವಾರರನ್ನ ಬೆನ್ನಟ್ಟಿ ಓವರ್ ಟೇಕ್ ಮಾಡಿ ಢಿಕ್ಕಿ ಹೊಡೆಸಿರುವ ಬಗ್ಗೆ ವ್ಯಕ್ತಿಯೋರ್ವರು ಮಾತನಾಡಿರುವ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಿಕ್ ಅಪ್ ವಾಹನ ಚಾಲಕ ಪ್ರತೀಕಾರ ತೀರಿಸಲಿಕ್ಕಾಗಿ ಅಪಘಾತವೆಸಗಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದ ಬಳಿಕ ಪಿಕಪ್ ಚಾಲಕ ಪರಾರಿಯಾಗಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
ಮೃತ ಜುನೈದ್ ಸಹೋದರ ಕಳೆದ ಕೋವಿಡ್ ಸಂದರ್ಭದಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದನೆನ್ನಲಾಗಿದೆ. ಅರ್ಫಾಝ್ ಸಹೋದರ ಕೆಲ ವರುಷದ ಹಿಂದೆ ಬೈಕಲ್ಲಿ ತೆರಳುವಾಗ ಮರದ ಕೊಂಬೆ ಬಿದ್ದು ಸಾವನ್ನಪ್ಪಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post