ಮಂಗಳೂರು: ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 17 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದೆ. ಮೊದಲ ಪಟ್ಟಿಯಲ್ಲಿ ಏಳು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿತ್ತು. ಇದೀಗ 24 ಕ್ಷೇತ್ರದ ಅಭ್ಯರ್ಥಿ ಪ್ರಕಟ ಆದಂತಾಗಿದೆ. ಬಹುತೇಕ ಕ್ಷೇತ್ರಗಳಲ್ಲಿ ಸಚಿವರ ಮಕ್ಕಳು, ಸಂಬಂಧಿಕರು ಲೋಕಸಭೆ ಟಿಕೆಟ್ ಪಡೆದಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ನ್ಯಾಯವಾದಿ, ಬಿಲ್ಲವ ಸಮುದಾಯದ ಸಂಘಟಕ ಪದ್ಮರಾಜ್ ಆರ್.ಗೆ ಟಿಕೆಟ್ ನೀಡಿದೆ. ಆ ಮೂಲಕ ಕಾಂಗ್ರೆಸ್ ಮತ್ತೆ ಬಿಲ್ಲವ ಸಮಾಜಕ್ಕೆ ಮಣೆ ಹಾಕಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಬಿಲ್ಲವ ಅಭ್ಯರ್ಥಿಗೆ ಅವಕಾಶ ಕಲ್ಪಿಸಿದಾಗಲೇ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಲ್ಲವ ಅಭ್ಯರ್ಥಿಗೆ ಮಣೆ ಹಾಕಲಿದೆ ಎಂದು ಹೇಳಲಾಗುತ್ತಿತ್ತು. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿಯ ಗರಡಿಯಲ್ಲಿ ಪಳಗಿರುವ ಪದ್ಮರಾಜ್ ಸದಾ ಹಸನ್ಮುಖಿ. ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಮಾಜ ಸೇವೆಯನ್ನು ಮೈಗೂಡಿಸಿಕೊಂಡು ಕಿರಿಯ ವಯಸ್ಸಿನಲ್ಲೇ ಕುದ್ರೋಳಿ ಗೋಕರ್ಣನಾಥ ದೇವಳದ ದೊಡ್ಡ ಜವಾಬ್ದಾರಿ ವಹಿಸಿಕೊಂಡು ಗಮನ ಸೆಳೆದವರು.
ಈಗಾಗಲೇ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಏಳು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಇದೀಗ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಇದರೊಂದಿಗೆ ಒಟ್ಟು 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ನಾಲ್ಕು ಕ್ಷೇತ್ರಗಳು ಮಾತ್ರ ಬಾಕಿ ಉಳಿದುಕೊಂಡಿವೆ.
ಕರ್ನಾಟಕದ 17 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
- ಬಾಗಲಕೋಟೆ ಲೋಕಸಭಾ ಕ್ಷೇತ್ರ-ಸಂಯುಕ್ತಾ ಪಾಟೀಲ್
- ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ-ಸೌಮ್ಯಾರೆಡ್ಡಿ
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಎಂ.ವಿ.ರಾಜೀವ್ ಗೌಡ
- ಮೈಸೂರು ಲೋಕಸಭಾ ಕ್ಷೇತ್ರ-ಎಂ.ಲಕ್ಷ್ಮಣ್
- ಚಿತ್ರದುರ್ಗ ಲೋಕಸಭಾ ಕ್ಷೇತ್ರ-ಬಿ.ಎನ್.ಚಂದ್ರಪ್ಪ
- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ-ಪದ್ಮರಾಜ್
- ಉಡುಪಿ, ಚಿಕ್ಕಮಗಳೂರು ಕ್ಷೇತ್ರ-ಜಯಪ್ರಕಾಶ್ ಹೆಗ್ಡೆ
- ಕಲಬುರಗಿ ಲೋಕಸಭಾ ಕ್ಷೇತ್ರ-ರಾಧಾಕೃಷ್ಣ ದೊಡ್ಡಮನಿ
- ದಾವಣಗೆರೆ ಲೋಕಸಭಾ ಕ್ಷೇತ್ರ-ಪ್ರಭಾ ಮಲ್ಲಿಕಾರ್ಜುನ
- ಬೆಂಗಳೂರು ಸೆಂಟ್ರಲ್ ಕ್ಷೇತ್ರ-ಮನ್ಸೂರ್ ಅಲಿಖಾನ್
- ಉತ್ತರ ಕನ್ನಡ ಕ್ಷೇತ್ರ-ಡಾ.ಅಂಜಲಿ ನಿಂಬಾಳ್ಕರ್
- ಧಾರವಾಡ ಲೋಕಸಭಾ ಕ್ಷೇತ್ರ-ವಿನೋದ್ ಅಸೋಟಿ
- ಕೊಪ್ಪಳ ಲೋಕಸಭಾ ಕ್ಷೇತ್ರ-ರಾಜಶೇಖರ್ ಹಿಟ್ನಾಳ್
- ಬೀದರ್ ಲೋಕಸಭಾ ಕ್ಷೇತ್ರ-ಸಾಗರ್ ಖಂಡ್ರೆ
- ರಾಯಚೂರು ಲೋಕಸಭಾ ಕ್ಷೇತ್ರ-ಕುಮಾರ್ ಜಿ ನಾಯಕ್
- ಬೆಳಗಾವಿ ಲೋಕಸಭಾ ಕ್ಷೇತ್ರ-ಮೃಣಾಲ್ ಹೆಬ್ಬಾಳ್ಕರ್
- ಚಿಕ್ಕೋಡಿ ಲೋಕಸಭಾ ಕ್ಷೇತ್ರ-ಪ್ರಿಯಾಂಕಾ ಜಾರಕಿಹೊಳಿ
ಸಚಿವರ ಮಕ್ಕಳಿಗೆ ಮಣೆ : ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಬೀದರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗ ಮೃಣಾಲ್ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿ, ಸಚಿವ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯಾರೆಡ್ಡಿಗೆ ಬೆಂಗಳೂರು ದಕ್ಷಿಣ ಟಿಕೆಟ್, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಅವರಿಗೆ ಬಾಗಲಕೋಟೆ ಲೋಕಸಭಾ ಟಿಕೆಟ್ ನೀಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post