ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಒಟ್ಟು ರೂ. 13.39 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಬಿ.ಎಸ್ಸಿ ಬಿ.ಇಡಿ ಪದವೀಧರರಾಗಿರುವ ಲೋಬೊ, ತಮ್ಮನ್ನು ಉದ್ಯಮಿ ಎಂದು ಹೇಳಿಕೊಂಡಿದ್ದು, ವಾರ್ಷಿಕ ರೂ. 49.69 ಲಕ್ಷ ವರಮಾನವಿದೆ ಎಂದು ತಿಳಿಸಿದ್ದಾರೆ. ಅವರ ಬಳಿ ರೂ. 9.82 ಕೋಟಿ ಮೌಲ್ಯದ ಚರಾಸ್ತಿ ಹಾಗೂ ರೂ. 3.57 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಫಿಲೋಮಿನಾ ಲೋಬೊ ಅವರೂ ಉದ್ಯಮಿಯಾಗಿದ್ದು, ಅವರಿಗೆ ವಾರ್ಷಿಕ ರೂ. 12.06 ಲಕ್ಷ ವರಮಾನವಿದೆ. ಅವರ ಬಳಿ ರೂ. 1.14 ಕೋಟಿ ಮೌಲ್ಯದ ಚರಾಸ್ತಿ ಹಾಗೂ ರೂ. 2.89 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಕುಟುಂಬದ ಒಟ್ಟು ಆಸ್ತಿ ರೂ. 17.42 ಕೋಟಿ.
ಅವರ ಪತ್ನಿ ಕೊಪ್ಪ ತಾಲ್ಲೂಕಿನ ಕೇಳ್ಕುಳ್ಳಿಯಲ್ಲಿ 1 ಎಕರೆ 82 ಸೆಂಟ್ಸ್ ಪಿತ್ರಾರ್ಜಿತ ಕೃಷಿ ಜಮೀನು ಹೊಂದಿದ್ದಾರೆ. ಮಳವೂರಿನಲ್ಲಿ 2020ರಲ್ಲಿ ರೂ.49.64 ಲಕ್ಷ ಮೌಲ್ಯದ 3.44ಎಕರೆ ಕೃಷಿ ಜಮೀನು ಖರೀದಿಸಿದ್ದಾರೆ. ಹಿರೇಕೆರೂರಿನಲ್ಲಿ 4 ಎಕರೆ ಕೃಷಿಯೇತರ ಜಮೀನು ಹಾಗೂ ಒಟ್ಟು 8 ನಿವೇಶನಗಳನ್ನು ಹೊಂದಿದ್ದು, ಅದರ ಮೌಲ್ಯ ರೂ. 1.50 ಕೋಟಿ. ಕೊಪ್ಪದಲ್ಲಿ 66 ಲಕ್ಷ ಮೌಲ್ಯದ ವಾಣಿಜ್ಯ ಕಟ್ಟಡ ಹೊಂದಿದ್ದಾರೆ. ಲೋಬೊ ವಿರುದ್ಧ ಯಾವುದೇ ಪ್ರಕರಣಗಳಿಲ್ಲ.
ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಒಟ್ಟು ರೂ. 20.15 ಕೋಟಿ ಆಸ್ತಿ ತಮ್ಮ ಹೆಸರಿನಲ್ಲಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಉದ್ಯಮಿಯಾಗಿರುವ ಇನಾಯತ್ ಅಲಿ (42 ವರ್ಷ) ವಾರ್ಷಿಕ 1.77 ಕೋಟಿ ವರಮಾನವನ್ನು ಹೊಂದಿದ್ದಾರೆ. ಅವರ ಬಳಿ ರೂ. 19.11 ಕೋಟಿ ಚರಾಸ್ತಿ ಹಾಗೂ ರೂ. 1.04 ಕೋಟಿ ಮೌಲ್ಯದ ಸ್ಥಿರಾಸ್ಥಿ ಇದೆ. ಅವರು ಒಟ್ಟು ರೂ. 1.38 ಕೋಟಿ ಸಾಲ ಹೊಂದಿದ್ದಾರೆ. ಅವರ ಪತ್ನಿ ಶಮಾ ಖತೀಜ ಅವರೂ ಉದ್ಯಮಿಯಾಗಿದ್ದು ವಾರ್ಷಿಕ ರೂ. 35.09 ಲಕ್ಷ ವರಮಾನ ಹೊಂದಿದ್ದಾರೆ. ಅವರಿಗೆ ರೂ. 63.69 ಲಕ್ಷ ಮೌಲ್ಯದ ಚರಾಸ್ತಿ ಹಾಗೂ ರೂ. 5.60 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿಗೆ ರೂ. 1.10 ಕೋಟಿ ಸಾಲ ಇದೆ. ಅಲಿ ಕುಟುಂಬವು ಒಟ್ಟು ರೂ. 26.38 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ.
ಅಲಿ ಅವರ ಬಳಿ ರೂ. 3 ಲಕ್ಷ ಹಾಗೂ ಅವರ ಪತ್ನಿ ಬಳಿ ರೂ. 2ಲಕ್ಷ ನಗದು ಇದೆ. ಅಲಿ ಅವರು ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು ರೂ. 3.35 ಕೋಟಿ ಠೇವಣಿ ಹೊಂದಿದ್ದಾರೆ. ಓಷೀನ್ ಕನ್ಸ್‌ಸ್ಟ್ರಕ್ಷನ್ಸ್ ಸಂಸ್ಥೆಯಲ್ಲಿ ರೂ. 52.05 ಲಕ್ಷ ಷೇರು ಹೊಂದಿದ್ದಾರೆ. ಉಳಿತಾಯ ಪತ್ರ ಹಾಗೂ ವಿಮೆಗಳಿಗೆ ಒಟ್ಟು ರೂ. 24.47 ಲಕ್ಷ ಹೂಡಿಕೆ ಮಾಡಿದ್ದಾರೆ. ಆರು ಮಂದಿಗೆ ಹಾಗೂ ಎರಡು ಸಂಸ್ಥೆಗಳಿಗೆ ಒಟ್ಟು ರೂ. 6.81 ಕೋಟಿ ಸಾಲ ನೀಡಿದ್ದಾರೆ. ಇದರಲ್ಲಿ ಜಾನ್ ಲೋಬೊ ಅವರಿಗೆ ನೀಡಿರುವ ರೂ. 50 ಲಕ್ಷವೂ ಸೇರಿದೆ. ಓಷೀನ್ ಕನ್‌ಸ್ಟ್ರಕ್ಷನ್ಸ್ ಕಂಪನಿಯ ಉದ್ಯೋಗಿಗಳ ವೇತನಕ್ಕೆ ರೂ. 7.06 ಕೋಟಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ರೂ.15.60 ಲಕ್ಷ ಮೌಲ್ಯದ ಇತರ ಸ್ವತ್ತುಗಳು ಅವರ ಬಳಿ ಇವೆ.
ಇನಾಯತ್ ಅಲಿ ಕುಟುಂಬದ ಬಳಿ 2,117 ಗ್ರಾಂ (2.1 ಕೆ.ಜಿ) ಚಿನ್ನ ಇದೆ. ಇದರಲ್ಲಿ 1,045 ಗ್ರಾಂ ಚಿನ್ನ ಅಲಿ ಅವರ ಹೆಸರಿನಲ್ಲಿದ್ದು, ಅದರ ಮೌಲ್ಯ ರೂ. 57.50 ಲಕ್ಷ. ಹಾಗೂ 1,072 ಗ್ರಾಂ ಚಿನ್ನ ಪತ್ನಿಯ ಹೆಸರಿನಲ್ಲಿದ್ದು, ಅದರ ಮೌಲ್ಯ ರೂ. 59 ಲಕ್ಷ. ಇನಾಯತ್ ಅಲಿ ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ. ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post