ಮಂಗಳೂರು, ಜು. 21: ಡ್ರಗ್ಸ್ ಮುಕ್ತ ಮಂಗಳೂರು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಮಂಗಳೂರು ನಗರ ಪೊಲೀಸರು ನಗರದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಪಿಸ್ತೂಲ್ ಹಾಗೂ ಡ್ರಗ್ ಸಹಿತ ದಸ್ತಗಿರಿ ಮಾಡಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್, ಉಳ್ಳಾಲದ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಎಸಿಪಿ, ಪಿಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬಂಟ್ವಾಳ ಫರಂಗಿಪೇಟೆಯ ಮುಹಮ್ಮದ್ ನಿಯಾಝ್ (28), ತಲಪಾಡಿ ಕೆ.ಸಿ ರೋಡ್ ನ ನಿಶಾದ್ (31), ಕಣ್ಣೂರಿನ ಮಹಮ್ಮದ್ ರಝೀನ್ (24) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಆರೋಪಿಗಳು ಕಾರಿನಲ್ಲಿ ಬಂದು ಉಳ್ಳಾಲ ತಾಲ್ಲೂಕು ತಲಪಾಡಿ ಗ್ರಾಮದ ಪಿಲಿಕೂರಿನಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಂಗಳೂರು ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಒಟ್ಟು 180 ಗ್ರಾಂ ತೂಕದ ರೂ.9ಲಕ್ಷ ಮೌಲ್ಯದ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ ಕುಮಾರ್ ಜೈನ್ ತಿಳಿಸಿದರು.
ಬಂಧಿತರಿಂದ ಎರಡು ಸ್ವಿಫ್ಟ್ ಕಾರು, ನಾಲ್ಕು ಮೊಬೈಲ್, ರೂ.22,050 ನಗದು, ಒಂದು ಪಿಸ್ತೂಲ್, ಒಂದು ಸಜೀವ ಗುಂಡು, ಎರಡು ಡ್ರಾಗನ್ ಚೂರಿಗಳು, ಡಿಜಿಟಲ್ ತೂಕ ಮಾಪನ ವಶಪಡಿಸಿಕೊಳ್ಳಲಾಗಿದೆ ಎಂದರು. ಮುಂಬೈ ಗೋವಾದಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಇನ್ನಷ್ಟು ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.
ಆರೋಪಿ ನಿಯಾಝ್ ಎಂಬಾತನ ವಿರುದ್ಧ ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಎಎಸ್ಐಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಹಲ್ಲೆ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸೆನ್ ಕೆರೈ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 2 ಪ್ರಕರಣ, ಉಡುಪಿಯ ಗಂಗೊಳ್ಳಿ ಠಾಣೆಯಲ್ಲಿ 2 ದರೋಡೆ ಪ್ರಕರಣ, ಕಂಕನಾಡಿ ನಗರ, ಕೊಣಾಜೆ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ 2 ಪ್ರಕರಣಗಳು ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯದ ವಿಚಾರಣೆ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ವಾರೆಂಟ್ ಜಾರಿಯಾಗಿರುತ್ತದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
Discussion about this post