ಕಾರವಾರ,, ಜುಲೈ 21: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದು ಇಂದಿಗೆ ಆರು ದಿನವಾಗಿದೆ. ನಿರಂತರ ಧಾರಾಕಾರ ಮಳೆಯಲ್ಲೂ ಕೂಡ ಕಾರ್ಯಾಚರಣೆ ಮುಂದುವರೆದಿದೆ. ಬೆಳಗಾವಿಯಿಂದ ಮಿಲಿಟರಿ ಪಡೆ ಕೂಡ ನೆರವಿಗೆ ದೌಡಾಯಿಸಿದೆ. ಇಂದು ಸಿಎಂ ಸಿದ್ದರಾಮಯ್ಯ ಮಳೆಯಲ್ಲೇ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದ್ದು, SDRF ಹಾಗೂ NDRF ಸಿಬ್ಬಂದಿಗೆ ಎದುರಾಗುತ್ತಿರುವ ಸವಾಲುಗಳನ್ನು ಪರಿಶೀಲನೆ ಮಾಡಿದ್ದಾರೆ. ದುರಂತದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲು ಸಿಎಂ ಸೂಚಿಸಿದ್ದಾರೆ.
ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜುಲೈ 16ರಂದು ಮಳೆಯಿಂದ ಶಿರೂರು ಬಳಿ ಗುಡ್ಡ ಕುಸಿದಿದೆ. ದುರಂತದಲ್ಲಿ 10 ಜನ ಸಾವನ್ನಪ್ಪಿದ್ದಾರೆ. ಈವರೆಗೆ 7 ಜನ ಶವ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದರು. ದುರಂತದಲ್ಲಿ ಗ್ಯಾಸ್ ಟ್ಯಾಂಕರ್, ಲಾರಿ ಕೊಚ್ಚಿ ಹೋಗಿದೆ. ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಸಲು ಸೂಚಿಸಿದ್ದೇನೆ. ಸದನ ನಡೆಯುತ್ತಿರುವುದರಿಂದ ತಕ್ಷಣ ಬರಲು ಆಗಿಲ್ಲ. ಉತ್ತರ ಕನ್ನಡ ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.
ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ : ಇನ್ನು ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಗುಡ್ಡ ಕುಸಿದಿರುವ ಆರೋಪ ಕೇಳಿಬಂದಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆ. ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಬಳಿಕ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ರಕ್ಷಣಾ ಕಾರ್ಯಾಚರಣೆಯನ್ನು ವಿಳಂಬ ಮಾಡಿಲ್ಲ. ಕೇರಳದ ಒಬ್ಬ ನಾಪತ್ತೆಯಾಗಿದ್ದಾನೆ, ಹೀಗಾಗಿ ಕೇರಳದವರು ಬಂದಿದ್ದಾರೆ. ಗುಡ್ಡು ಕುಸಿದಿರುವ ಎಲ್ಲಾ ಕಡೆ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ನೈಸರ್ಗಿಕ ವಿಪತ್ತು ಸಂಭವಿಸಿದೆ, ಯಾರ ವಿರುದ್ಧವೂ ಆರೋಪ ಮಾಡಲ್ಲ. ಈ ವಿಚಾರದಲ್ಲಿ ರಾಜಕೀಯವೂ ಮಾಡಲ್ಲ ಎಂದು ಹೆಚ್‌ಡಿ ಕುಮಾರಸ್ವಾಮಿ ಟೀಕೆಗೆ ಟಾಂಗ್ ನೀಡಿದ್ದಾರೆ. ಗುಡ್ಡ ಕುಸಿತದಿಂದ ಮುಚ್ಚಿ ಹೋಗಿರುವ ರಸ್ತೆಯ ಎಡಭಾಗದಲ್ಲಿ ಕುಸಿತದ ಗುಡ್ಡ-ಬಲ ಭಾಗದಲ್ಲಿ ಭೋರ್ಗರೆದು ಹರಿಯುತ್ತಿರುವ ಕಾಳಿ ನದಿ ಇದೆ. ಜೊತೆಗೆ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಮಣ್ಣಿನಡಿ ಸಿಲುಕಿರುವ ಜೀವಗಳ ಪತ್ತೆ ಕಾರ್ಯ ಬಹಳ ಸವಾಲಿನದ್ದಾಗಿದ್ದು ಸಿಬ್ಬಂದಿಯ ಶ್ರಮಕ್ಕೆ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post