ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾಗೆ ಮುಂಬಯಿ ನ್ಯಾಯಾಲಯ ಜಾಮೀನು ನೀಡಿದೆ. 50 ಸಾವಿರ ಶ್ಯೂರಿಟಿಯೊಂದಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಹಿಂದೆ ಜಾಮೀನು ಕೋರಿ ರಾಜ್ ಕುಂದ್ರಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯ ಈ ಅರ್ಜಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಬಾಂಬೆ ಹೈ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.
ಪ್ರಕರಣದಲ್ಲಿ ಬಂಧಿಯಾರಗಿರುವ ಮತ್ತೊಬ್ಬ ಆರೋಪಿಯಾದ ರಾಜ್ ಕುಂದ್ರಾ ಸಂಸ್ಥೆಯೊಂದರ ಐಟಿ ಮುಖ್ಯಸ್ಥ ರಯಾನ್ ಥಾರ್ಪೆಗೆ ಕೂಡ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಉದ್ಯಮಿ ರಾಜ್ ಕುಂದ್ರಾ ಪರವಾಗಿ ವಾದಿಸಿದ ವಕೀಲ ಪ್ರಶಾಂತ್ ಪಾಟೀಲ್, ವಿಡಿಯೋ ತಾಣಗಳಿಗೆ ಯಾವ ರೀತಿಯ ವಿಷಯವನ್ನು ಅಪ್ಲೋಡ್ ಮಾಡಬೇಕೆಂದು ಸೆಲೆಬ್ರಿಟಿ ಮತ್ತು ನಿರ್ಮಾಪಕರು ನಿರ್ಧರಿಸುತ್ತಾರೆ. ಏನನ್ನು ಅಪ್‌ಲೋಡ್ ಮಾಡಬೇಕೆಂದು ಕುಂದ್ರಾ ಅಥವಾ ರಯಾನ್ ನಿರ್ಧರಿಸಲಿಲ್ಲ. 1400 ಪುಟಗಳ ಚಾರ್ಜ್‌ಶೀಟ್‌ನಲ್ಲಿ, ಕುಂದ್ರಾ ಅಪ್‌ಲೋಡ್ ಮಾಡುತ್ತಿರುವುದನ್ನು ತೋರಿಸುವ ಒಂದು ಸಾಕ್ಷ್ಯವೂ ಇಲ್ಲ ಎಂದು ಕೋರ್ಟ್ಗೆ ತಿಳಿಸಿದರು.
ಇನ್ನು ರಾಜ್ ಕುಂದ್ರಾ ಅವರಿಗೆ ಜಾಮೀನು ನೀಡಿದರೆ ಸಾಕ್ಷ್ಯಾ ನಾಶ ಮಾಡುವ ಸಾಧ್ಯತೆ ಇದೆ ಎಂದು ಪ್ರಾಸಿಕ್ಯೂಷನ್ ಪ್ರತಿವಾದಿಸಿತು. ಇಂದು ಸಂಜೆ ಪ್ರಕರಣ ಆಲಿಸಿದ ನ್ಯಾಯಾಲಯ ಜಾಮೀನು ನೀಡಿದ್ದು, ನ್ಯಾಯಾಲಯದ ಕೆಲ ಕಾರ್ಯಗಳು ಮುಗಿದ ವೇಳೆ ಅವರು ಇಂದು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನವಾಗಿದೆ. ನಾಳೆ ಅಥವಾ ನಾಡಿದ್ದು, ರಾಜ್ ಕುಂದ್ರಾ ಬಿಡುಗಡೆ ಆಗಲಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ ಸಂಬಂಧಿಸಿದಂತೆ ಮುಂಬೈ ಪೊಲೀಸರು ಉದ್ಯಮಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ್ದರು. ರಾಜ್ ಕುಂದ್ರಾ ಜೊತೆಗೆ ಆತನ ಸಹಚರ ಮತ್ತು ಪ್ರಕರಣದ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದಲ್ಲಿ ತನ್ನನ್ನು ಬಲಿಪಶು ಮಾಡಲಾಗಿದೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂಬ ಕುರಿತು ಯಾವುದೇ ಸಾಕ್ಷಿಗಳು ಇಲ್ಲ ಎಂದು ರಾಜ್ ಕುಂದ್ರಾ ಅರ್ಜಿಯಲ್ಲಿ ತಿಳಿಸಿದ್ದರು. ಕಳೆದ ಗುರುವಾರ ಉದ್ಯಮಿ ರಾಜ್ ಕುಂದ್ರಾ ಮೇಲೆ 1400 ಪುಟಗಳ ಚಾರ್ಜ್ ಶೀಟ್ ಅನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.