ಮಂಗಳೂರು, ಸೆ.20 : ಬ್ರಹ್ಮಶ್ರೀ ನಾರಾಯಣಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಧ್ಯೇಯೋದ್ದೇಶದೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಕುಂಜತ್ತಬೈಲಿನಲ್ಲಿ ದಿ.ದಾಮೋದರ ಆರ್. ಸುವರ್ಣ ಸ್ಮಾರಕ ಬಿಲ್ಲವ ಹಾಸ್ಟೆಲ್ ನಿರ್ಮಿಸಲಾಗಿದ್ದು ಸೆ.24 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಅಖಿಲ ಭಾರತ ಬಿಲ್ಲವರ ಯುನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಗರದ ಪುರಭವನದಲ್ಲಿ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮಾಜಿ ಕೇಂದ್ರ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ನಡೆಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ ವಹಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಬಿಡುಗಡೆಗೊಳಿಸಲಿದ್ದಾರೆ.
5.25 ಕೋಟಿ ರೂ. ವೆಚ್ಚದ ಕಟ್ಟಡ : ಮಂಗಳೂರು ನಗರದಿಂದ 6 ಕಿ.ಮೀ. ದೂರದ ಕುಂಜತ್ತಬೈಲ್‌ನ ಪ್ರಶಾಂತ ವಾತಾವರಣದಲ್ಲಿ ಒಂದು ಎಕರೆ ವ್ಯಾಪ್ತಿಯಲ್ಲಿ 5.25 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದೆ. ಬಿಲ್ಲವ ಹಾಗೂ ಹಿಂದುಳಿದ ಸಮುದಾಯದಲ್ಲಿ ಉನ್ನತ ವೃತ್ತಿ ಶಿಕ್ಷಣ ಬಯಸುವ ವಿದ್ಯಾರ್ಥಿಗಳ ಅನುಕೂಲತೆಗಾಗಿ ಹಾಸ್ಟೆಲ್ ಕೊಡಿಸುವ ಉದ್ದೇಶ ಇದೆ. 5 ಮಹಡಿಯ ಕಟ್ಟಡ ಇದಾಗಿದ್ದು ಒಟ್ಟು 19,500 ಚದರ ಅಡಿ ವಿಸ್ತೀರ್ಣ ಹೊಂದಿದೆ. ನೆಲ ಅಂತಸ್ತಿನಲ್ಲಿ ಆಡಳಿತ ಕಚೇರಿ, ಗ್ರಂಥಾಲಯ ಹಾಗೂ ವಸತಿ ಕೊಠಡಿಗಳು, 1ನೇ ಹಾಗೂ 3ನೇ ಮಹಡಿಯಲ್ಲಿ ವಸತಿ ಕೊಠಡಿ ಮತ್ತು 2ನೇ ಮಹಡಿಯಲ್ಲಿ ಸಭಾಂಗಣ ಒಳಗೊಂಡಿದೆ. ತಳಮಹಡಿಯಲ್ಲಿ ಅಡುಗೆ ಕೋಣೆ, ಉಗ್ರಾಣ ಕೋಣೆಗಳಿವೆ. ಸುಮಾರು 100 ಮಂದಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾದ ವಸತಿ ಸೌಲಭ್ಯವಿದ್ದು ವೃತ್ತಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲ ಇರಲಿದೆ.
ಮುಖ್ಯ ಅಥಿತಿಗಳಾಗಿ ಮಾಜಿ ಸಂಸದ ಡಿ.ವಿ. ಸದಾನಂದ ಗೌಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ. ಸುನೀಲ್ ಕುಮಾರ್, ಉಮನಾಥ್ ಕೋಟ್ಯಾನ್, ವೇದವ್ಯಾಸ್ ಕಾಮತ್, ಡಾ.ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಮುಖ್ಯ ಸಚೇತಕ ಕೆ. ವಸಂತ ಬಂಗೇರ, ಮಾಜಿ ಶಾಸಕ ಗೋಪಾಲ ಪೂಜಾರಿ ಉಪಸ್ಥಿತಿ ಇರಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ ಉದ್ಯಮಿ ಜಯರಾಮ ಬನಾನ್, ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಉದಯಚಂದ್ರ ಡಿ. ಸುವರ್ಣ, ಆರ್ಯ ಈಡಿಗ ಸಂಘದ ಅಧ್ಯಕ್ಷ ತಿಮ್ಮೇಗೌಡ, ಉದ್ಯಮಿ ಜೆ.ಪಿ. ಸುಧಾಕರ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್.ಟಿ. ಪೂಜಾರಿ, ಮುಂಬಯಿ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜೆ. ಅಮೀನ್, ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ವೇದಕುಮಾರ್, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ದುಬಾಯಿ ಬಿಲ್ಲವ ಬಳಗ-ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಸುವರ್ಣ, ಕಾರ್ಪೊರೇಟರ್ ಶರತ್ ಕುಮಾರ್ ಉಪಸ್ಥಿತರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಉದ್ಯಮಿ ಸುಶೀರ್ ಕುಮಾರ್, ಇಂಜಿನಿಯರ್ ಬಾಬು ಅಲಂಕಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಸುಖಲಾಕ್ಷಿ ಸುವರ್ಣ, ಕೋಶಾಧಿಕಾರಿ ಕಾಶೀನಾಥ್, ಜೊತೆ ಕಾರ್ಯದರ್ಶಿ ಯೋಗೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post