ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ವೈದ್ಯೆಯೊಬ್ಬಳು ಅನ್ಯಧರ್ಮದ ಯುವಕನನ್ನು ಮದುವೆಯಾಗಲು ಮುಂದಾಗಿದ್ದು, ಅದರ ಆಹ್ವಾನ ಪತ್ರಿಕೆ ವೈರಲ್ ಆಗಿ ಕರಾವಳಿಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಕೆಯ ಮದುವೆ ಆಗಲಿದೆ ಎಂಬಷ್ಟರಲ್ಲಿ ಸ್ವಾಮೀಜಿಯೊಬ್ಬರು ಮಧ್ಯಪ್ರವೇಶಿಸಿದ್ದಾರೆ.
ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಯುವಕ- ಯುವತಿಯ ಪರಿಚಯ ಪ್ರೀತಿಗೆ ತಿರುಗಿತ್ತು. ಅದರಂತೆ, ಹಿಂದು ಯುವತಿಯನ್ನು ಕೇರಳದ ಕಣ್ಣೂರು ಜಿಲ್ಲೆಯ ನಿವಾಸಿ ಜಫರ್ ಎಂಬಾತ ಮದುವೆಯಾಗಲು ತಯಾರಿ ನಡೆದಿತ್ತು. ನ.29ರಂದು ಕಣ್ಣೂರಿನ ಬೀಚ್ ರೆಸಾರ್ಟ್ ಒಂದರಲ್ಲಿ ಮದುವೆ ರಿಸೆಪ್ಶನ್ ನಡೆಯುವ ಬಗ್ಗೆ ಆಮಂತ್ರಣ ಪತ್ರ ವೈರಲ್ ಆಗಿತ್ತು. ಯುವತಿಯ ಹೆತ್ತವರು ಮತ್ತು ಯುವಕನ ಜೊತೆಗಿದ್ದ ಆಕೆಯ ಫೋಟೋ ಕೂಡ ವೈರಲ್ ಆಗಿದ್ದು ಹಿಂದು ಸಂಘಟನೆ ಕಾರ್ಯಕರ್ತರಿಂದ ಆಕ್ರೋಶವೂ ಕೇಳಿಬಂದಿತ್ತು.
ಈಗಾಗಲೇ ನಿಶ್ಚಯವಾಗಿರುವ ಪ್ರಕಾರ ಈ ವೈದ್ಯಕೀಯ ವಿದ್ಯಾರ್ಥಿನಿ ನ.29ರಂದು ಕೇರಳದ ಕಣ್ಣೂರಿನಲ್ಲಿ ಡಾ.ಜಾಫರ್ ಎಂಬಾತನನ್ನು ಮದುವೆ ಆಗುವುದಿತ್ತು. ಆದರೆ ಆ ಯುವತಿ ಈ ಮದುವೆ ಮಾಡಿಕೊಳ್ಳದಂತೆ ಮನವೊಲಿಸಲು ಆಕೆಯ ಮನೆಗೆ ವಜ್ರದೇಹಿ ಸ್ವಾಮೀಜಿ ತೆರಳಿದ್ದರು
ಗುರುಪುರದ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಅವರು ಆ ಯುವತಿಯ ಮನೆಗೆ ಇಂದು ತೆರಳಿ, ಯುವತಿಯ ನಿರ್ಧಾರ ಬದಲಿಸಲು ಯತ್ನಿಸಿದ್ದಾರೆ. ಅನ್ಯಧರ್ಮದ ಯುವಕನನ್ನು ಮದುವೆಯಾದರೆ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಸುದೀರ್ಘ ಮಾತುಕತೆ ಬಳಿಕ ಸ್ವಾಮೀಜಿಯ ಮಾತಿಗೆ ಸಮ್ಮತಿ ಸೂಚಿಸಿದ ಯುವತಿ ಸದ್ಯ ಈ ಮದುವೆಯಿಂದ ಹಿಂದಕ್ಕೆ ಸರಿದಿದ್ದಾಳೆ.
ವಜ್ರದೇಹಿ ಸ್ವಾಮೀಜಿ ಜೊತೆಗೆ ವಿಎಚ್ ಪಿ ನಾಯಕರಾದ ಶರಣ್ ಪಂಪ್ವೆಲ್, ಭುಜಂಗ ಕುಲಾಲ್, ಶಿವಾನಂದ ಮೆಂಡನ್ ಸೇರಿದಂತೆ ಯುವತಿಯ ಹತ್ತಿರದ ಸಂಬಂಧಿಕರು ಇದ್ದರು. ಯುವತಿಯ ತಂದೆ ಪಾಂಡೇಶ್ವರದಲ್ಲಿ ಬೇಕರಿ ಹೊಂದಿದ್ದು, ಸ್ಥಳೀಯವಾಗಿ ಉತ್ತಮ ಹೆಸರು ಹೊಂದಿದ್ದಾರೆ.
Discussion about this post