ಮಂಗಳೂರು, ನ.21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಸ್ ಡಿಪಿಐ ಬೆಳವಣಿಗೆಯನ್ನು ಕಂಡು ಕಾಂಗ್ರೆಸ್ ನಾಯಕರು ನಿರಾಶ ಭಾವನೆಗೆ ಹೋಗುತ್ತಿದ್ದಾರೆ. ಹಾಗಾಗಿ ನಮ್ಮ ಕಾರ್ಯಕರ್ತರ ವಿರುದ್ಧ ವಿನಾಕಾರಣ ಹಲ್ಲೆ ನಡೆಸುತ್ತಿದ್ದಾರೆ. ಆದರೆ, ನಾವು ಇನ್ನು ಸುಮ್ಮನಿರಲ್ಲ. ನಿಮ್ಮನ್ನು ನೇರವಾಗಿ ಖಬರಸ್ತಾನಕ್ಕೆ ಕಳಿಸಲಿದ್ದೇವೆ ಎಂದು ಎಸ್ ಡಿಪಿಐ ನೂತನ ಜಿಲ್ಲಾಧ್ಯಕ್ಷ ಅಬುಬಕ್ಕರ್ ಕುಳಾಯಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.
ಅಬುಬಕ್ಕರ್ ಇತ್ತೀಚೆಗೆ ಎಸ್ ಡಿಪಿಐ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಈ ಮಾತು ಆಡಿದ್ದು ಅದರ ವಿಡಿಯೋ ತುಣುಕು ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ 58 ಮಂದಿ ಜನಪ್ರತಿನಿಧಿಗಳು ಎಸ್ ಡಿಪಿಐ ಪಕ್ಷದಲ್ಲಿ ಬೆಳೆದಿದ್ದಾರೆ. ಇದರಿಂದ ಕಾಂಗ್ರೆಸಿಗರು ನಿರಾಶರಾಗುತ್ತಿದ್ದಾರೆ. ಇಷ್ಟರ ವರೆಗೆ ನಾವು ತಲೆ ತಗ್ಗಿಸಿದ್ದೇವೆ. ಈಗ ಯಾರೋ ಕಾಂಜಿ ಪೀಂಜಿ ಗಾಂಜಾ ಪಾರ್ಟಿಗಳನ್ನು ಮುಂದೆ ಬಿಟ್ಟು ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು. ಇಷ್ಟರ ವರೆಗೆ ತಲೆ ತಗ್ಗಿಸಿದ್ದೇವೆ. ಎಸ್ ಡಿಪಿ ಐ ಬಳಿ ಎರಡು ಎಂ ಇದೆ, ಒಂದು ಮ್ಯಾನ್ ಪವರ್. ಇನ್ನೊಂದು ಮಸಲ್ ಪವರ್. ಇನ್ನು ಎಲ್ಲಿಯಾದರೂ ನಮ್ಮ ಪಕ್ಷದ ಕಾರ್ಯಕರ್ತರನ್ನು ಮುಟ್ಟಿದರೆ ನಮ್ಮ ಒಂದು ಎಂ ಅನ್ನು ಉಪಯೋಗ ಮಾಡಬೇಕಾಗುತ್ತದೆ. ಹಾಗಾಗಿ ಜಾಗ್ರತೆಯಿಂದ ಇರಿ ಎಂದು ಅಬುಬಕ್ಕರ್ ಕುಳಾಯಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ನಮ್ಮ ನಾಯಕರು ಹೇಳಿದ್ದಾರೆ, ನಮ್ಮ ಪಾರ್ಟಿಗೆ ಬರೋದಾದ್ರೆ ಎಲ್ಲದಕ್ಕೂ ಸಿದ್ಧರಾಗಿಬೇಕು. ಆಸ್ಪತ್ರೆಯಲ್ಲಿ ಮಲಗುವುದಕ್ಕೂ ಸಿದ್ಧರಾಗಿರಬೇಕು. ಜೈಲಿಗೆ ಹೋಗುವುದಕ್ಕೂ ಸಿದ್ಧ ಇರಬೇಕು. ಅಗತ್ಯ ಬಿದ್ದರೆ ಖಬರಸ್ತಾನಕ್ಕೆ ಹೋಗುವುದಕ್ಕೂ ಸಿದ್ಧರಿರಬೇಕು. ಕಾನೂನಿಗೆ ಗೌರವ ಕೊಟ್ಟು ಇಲ್ಲಿವರೆಗೆ ಬಿಟ್ಟಿದ್ದೇವೆ. ಆದರೆ ಮುಂದಿನ ದಿನಗಳಲ್ಲಿ ನಾವು ಬಿಡೋದಿಲ್ಲ ಎಂದು ತಮ್ಮ ಕಾರ್ಯಕರ್ತರಿಗೆ ಪ್ರಚೋದನೆ ನೀಡುವ ರೀತಿ ಮಾತನಾಡಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಮಂಗಳೂರು ಕ್ಷೇತ್ರದಲ್ಲಿ ನಮ್ಮ ಎಸ್ ಡಿಪಿಐ ಪ್ರತಿನಿಧಿಗಳು ಬೆಳೆಯುತ್ತಿದ್ದಾರೆ. ಇದನ್ನ ಕಂಡು ಅವರಿಗೆ ಸಹಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಎಸ್ ಡಿಪಿಐ ಜಿಲ್ಲಾಧ್ಯಕ್ಷರಾಗಿದ್ದ ಅತ್ತಾವುಲ್ಲಾ ಜೋಕಟ್ಟೆ ಜಾಗಕ್ಕೆ ಅಬುಬಕ್ಕರ್ ಕುಳಾಯಿ ಎಂಬವರು ನೇಮಕಗೊಂಡಿದ್ದು, ಹಿಂದಿಗಿಂತ ಹೆಚ್ಚು ಜನರನ್ನು ಒಗ್ಗೂಡಿಸಲು ಮುಂದಾಗಿರುವ ಸುಳಿವು ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post