ಮಂಗಳೂರು, ನ.20: ರಾಷ್ಟ್ರೀಯ ಹೆದ್ದಾರಿ 75ರ ಪಂಪ್‌ವೆಲ್ ಸಮೀಪದ ನಾಗುರಿ ಎಂಬಲ್ಲಿ ಶನಿವಾರ ಸಂಜೆ ಆಟೊ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ವೇಳೆ ರಿಕ್ಷಾದಲ್ಲಿದ್ದ ಆರೋಪಿ ಪ್ರಯಾಣಿಕನ ಗುರುತನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುಹಮ್ಮದ್ ಶಾರಿಕ್(24) ಆರೋಪಿಯಾಗಿದ್ದಾನೆ. ಈತ 2020ರಲ್ಲಿ ಮಂಗಳೂರು ನಗರದಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆ ಬರಹ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಎಂದು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಹಾಗೂ ಕುಟುಂಬದವರು ಆತ ಶಾರಿಕ್ ಎಂದು ಗುರುತಿಸಿರುವುದಾಗಿ ಎಡಿಜಿಪಿ ತಿಳಿಸಿದ್ದಾರೆ. ಈತನ ಮೇಲೆ ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲು ಪ್ರಕರಣದಲ್ಲಿ ಸುಟ್ಟ ಗಾಯ ಆಗಿದ್ದ ವ್ಯಕ್ತಿಯ ಜೊತೆಗಿದ್ದ ಆಧಾರ್ ಕಾರ್ಡ್ ನಲ್ಲಿ ಹುಬ್ಬಳ್ಳಿ ಮೂಲದ ಪ್ರೇಮ್ ರಾಜ್ ವಿಳಾಸ ಇತ್ತು. ಅಲ್ಲಿ ಚೆಕ್ ಮಾಡಿದಾಗ ಪ್ರೇಮ್ ರಾಜ್ ಅಲ್ಲಿ ಮನೆ ಬಿಟ್ಟಿರುವುದು ಗೊತ್ತಾಗಿತ್ತು. ಬಳಿಕ ಚೆಕ್ ಮಾಡಿದಾಗ ತುಮಕೂರಿನಲ್ಲಿ ರೈಲ್ವೇ ಉದ್ಯೋಗಿ ಆಗಿರುವುದು ತಿಳಿದು ಸ್ವತಃ ನಾನು ಫೋನ್ ಮಾಡಿದ್ದೆ. ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಸೂಚಿಸಿದ್ದೆ. ಪ್ರೇಮರಾಜ್ ತನ್ನ ಆಧಾರ್ ಕಾರ್ಡ್ ಕಳೆದು ಹೋಗಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಆಧಾರ್ ಕಾರ್ಡ್ ನಲ್ಲಿ ಬೇರೆ ಫೋಟೊ ಮತ್ತು ಈ ವ್ಯಕ್ತಿ ಬೇರೆ ಇದ್ದಿರುವುದು ನೋಡಿ ಸಂಶಯ ಬಂದಿತ್ತು. ನಮಗೆ ಶಾರೀಕ್ ಅಂತ ಅನುಮಾನ ಬಂದಿತ್ತು. ಆದರೂ ಅವರ ಮನೆಯವರನ್ನ ಕರೆಸಿ ಗುರುತು ಪತ್ತೆ ಮಾಡಿದ್ದೇವೆ. ಅವರ ಮಲತಾಯಿ ಶಬನಾ, ಸಹೋದರಿ ಆಫಿಯಾ, ತಾಯಿ ತಂಗಿ ಯಾಸ್ಮೀನ್ ಅವನ ಗುರುತು ಪತ್ತೆ ಮಾಡಿದ್ದಾರೆ.

ಈ ಎರಡು ಪ್ರಕರಣದಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ. ಶಾರಿಕ್ ವಿರುದ್ಧ 2022ರ ಸೆ.19ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ UNLAWFUL ACTIVITIES (PREVENTION) ACT 1967 ಪ್ರಕರಣ ದಾಖಲಾಗಿದ್ದು, ಇದರಲ್ಲಿ ಈತ 1ನೇ ಆರೋಪಿಯಾಗಿದ್ದಾನೆ. ಪ್ರಕರಣ ದಾಖಲಾದ ನಂತರ ಶಾರಿಕ್ ಅಲ್ಲಿಂದ ತಲೆಮರೆಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದನು. ನ.19ರಂದು ಮೈಸೂರಿನಿಂದ ಹೊರಟಿದ್ದ ಶಾರಿಕ್ ಹೂಣಸೂರು, ಮಡಿಕೇರಿ, ಮತ್ತೂರು, ಬಿ.ಸಿ.ರೋಡ್ ಮೂಲಕ ಮಂಗಳೂರಿಗೆ ಆಗಮಿಸಿ ನಗರ ಹೊರವಲಯದಲ್ಲಿ ಬಸ್ಸಿನಿಂದ ಇಳಿದು ನಂತರ ಆಟೋದಲ್ಲಿ ಪಂಪವೆಲ್ ಕಡೆಗೆ ಹೋಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಆರೋಪಿ ವಾಸವಿದ್ದ ಬಾಡಿಗೆ ಮನೆಯಿಂದ ಸಲ್ಫೆಕ್ಸ್ ಸಲ್ಫರ್ ಪೌಡರ್, ನಟ್ ಬೋಲ್ಡ್‌ಗಳು, ಸರ್ಕ್ಯೂಟ್‌ಗಳು, ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಗ್ರೈಂಡರ್, ಮಿಕ್ಸರ್, ಮ್ಯಾಚ್ ಬಾಕ್ಸ್, ಬ್ಯಾಟರಿ, ಮೈಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಅಲ್ಯೂಮಿನಿಯಂ ಫೈಲ್ ಸಿಮ್ ಕಾರ್ಡ್‌ಗಳು, ಮೊಬೈಲ್‌ನ ಡಿಸ್‌ಪ್ಲೆಗಳು, ಸ್ಫೋಟಕಕ್ಕೆ ಬಳಸುವ ವಿವಿಧ ಬಗೆಯ ಕೆಮಿಕಲ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಡಿಜಿಪಿ ಹೇಳಿದ್ದಾರೆ





ಆಟೋ ಚಾಲಕನಿಗೆ ಪರಿಹಾರ : ಮೈಸೂರು ಬಿಟ್ಟು ಬೇರೆ ಇನ್ನೆಲ್ಲ ಇದ್ದ. ಆತನಿಗೆ ಯಾರೆಲ್ಲ ಸಹಕಾರ ನೀಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ದೊಡ್ಡ ಅನಾಹುತ ತಪ್ಪಿದೆ, ಸ್ವಲ್ಪ ಡ್ಯಾಮೇಜ್ ಅಷ್ಟೇ ಆಗಿದೆ. ದೊಡ್ಡ ದುರಂತ ಆಗುತ್ತಿದ್ದರೆ ಕರಾವಳಿಯಲ್ಲಿ ಕಮ್ಯನಲ್ ಸಮಸ್ಯೆ ಆಗುತ್ತಿತ್ತು. ಈ ಭಾಗದಲ್ಲಿ ಕಮ್ಯುನಲ್ ಟೆನ್ಶನ್ ಹೆಚ್ಚು ಇದೆ. ಆತನಲ್ಲಿ ಮತ್ತಷ್ಟು ಮಾಹಿತಿ ಪಡೆಯಲು ಚಿಕಿತ್ಸೆ ಅಗತ್ಯವಿದೆ. ಬದುಕಿಸಬೇಕಾಗಿದೆ, ಆನಂತರ ಬಹಳಷ್ಟು ವಿಚಾರಣೆ ಆಗಬೇಕಿದೆ. ಘಟನೆಯಲ್ಲಿ ಗಾಯಗೊಂಡಿರುವ ಆಟೋ ಚಾಲಕ ಪುರುಷೋತ್ತಮ್ ಇದರಲ್ಲಿ ಸಂತ್ರಸ್ತ, ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ಸಿಗಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಸುಟ್ಟ ಗಾಯಗೊಂಡಿರುವ ಆರೋಪಿ ಗುಣಮುಖನಾದ ನಂತರ ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು. ಈ ಪ್ರಕರಣದ ತನಿಖೆಗೆ ಎಸಿಪಿ ಪರಮೇಶ್ವರ ಹೆಗಡೆಯವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮೈಸೂರು ನಗರ ಕಮಿಷನರ್ ರಮೇಶ್ ಬಿ., ಮಂಗಳೂರು ನಗರ ಕಮಿಷನರ್ ಶಶಿಕುಮಾರ್, ಡಿಸಿಪಿಗಳಾದ ಅನ್ಶುಕುಮಾರ್, ದಿನೇಶ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post