ಮಂಡ್ಯ: ರಾಜ್ಯದಲ್ಲಿ ಪೊಲೀಸ್ ತನಿಖೆಯ ಲೋಪಕ್ಕೆ ನಿರಪರಾಧಿಯೊಬ್ಬರು ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 7 ವರ್ಷಗಳ ಹಿಂದೆ ಕೊಲೆಯಾಗಿದ್ದಾಳೆ ಎಂದು ಭಾವಿಸಿದ್ದ ಮಹಿಳೆಯೊಬ್ಬರು ಡಿಢೀರ್ ಪ್ರತ್ಯಕ್ಷವಾಗಿದ್ದಾರೆ, ಆಕೆಯ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ವ್ಯಕ್ತಿ ನಿರಪರಾಧಿ ಎಂಬುದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದ ಮೇಲೆ ಅಮಾಯಕ ವ್ಯಕ್ತಿ ರಾಜೇಶ್ ಎಂಬಾತ 2.5 ವರ್ಷ ಜೈಲಿಗೆ ಹೋಗಿದ್ದ ಅಮಾನವೀಯ ಘಟನೆ ಪಾಂಡವಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ 2021ರಿಂದ ಸುಮಾರು ಎರಡೂವರೆ ವರ್ಷ ಜೈಲಿನಲ್ಲಿದ್ದ ರಾಜೇಶ್, 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದೆ. ನಾಗಮಂಗಲ ಪಟ್ಟಣದಲ್ಲಿ ಮಂಜು ಜೀವಂತವಾಗಿರುವುದು ಪತ್ತೆಯಾಗಿದೆ. ರಾಜೇಶ್ ಪರ ವಕೀಲ ನಟೇಶ್ ಅವರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಮಹಿಳೆಯನ್ನು ಪತ್ತೆಹಚ್ಚಲಾಗಿದೆ.
ವರ್ಷಗಳ ನಂತರ ಸಿಕ್ಕ ಮಹಿಳೆ ಹೇಳಿದ್ದೇನು? ; ನಂತರ ಆಕೆಯನ್ನು ಬಿಂಡಿಗನವಿಲೆ ಪೊಲೀಸರ ವಶಕ್ಕೆ ಒಪ್ಪಿಸಿ ಹೇಳಿಕೆ ದಾಖಲಿಸಲಾಗಿದೆ. ಇಷ್ಟವಿಲ್ಲದ ಮದುವೆ ಮಾಡಿಸಿದ್ದರಿಂದ ಮನೆ ಬಿಟ್ಟು ಹೋಗಿದ್ದೆ. ಇದೀಗ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದೇನೆ. ರಾಜೇಶ್ ಎಂಬುವವರ ಪರಿಚಯವೇ ನನಗಿಲ್ಲ ಎಂದು ಮಂಜು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮಹಿಳೆ ಜೀವಂತವಾಗಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ, ನಿರಪರಾಧಿಯೊಬ್ಬನನ್ನು ಕೊಲೆ ಆರೋಪದಲ್ಲಿ ಜೈಲಿಗೆ ಕಳುಹಿಸಿದ ಪ್ರಕರಣದ ತನಿಖೆ ಇದೀಗ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಪೊಲೀಸರ ತನಿಖಾ ಲೋಪ, ಬಲವಂತದ ತಪ್ಪೊಪ್ಪಿಗೆ ಆರೋಪ ಹಾಗೂ ರಾಜೇಶ್ ಅನುಭವಿಸಿದ ಜೈಲುವಾಸಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
Discover more from Coastal Times Kannada
Subscribe to get the latest posts sent to your email.






Discussion about this post