ಉಡುಪಿ, ಜ.22 : ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ನಂಬಿಕೆ ದ್ರೋಹ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಯಾವುದೇ ಜಾಗದಲ್ಲಿ ಚುನಾವಣೆ ನಿಂತರೂ ಸೊಲಿಸಿಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿರೋಧ ಪಕ್ಷಗಳ ನಾಯಕ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದ್ದಾರೆ.
ಉಡುಪಿಗೆ ರವಿವಾರ ಆಗಮಿಸಿದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ತಮ್ಮ ಭಾಷಣದ ಸಂದರ್ಭದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ಎಸಗಿದ ದ್ರೋಹವನ್ನು ಉಲ್ಲೇಖಿಸಿ ಈ ಮಾತುಗಳನ್ನಾಡಿದರು. ಕಾಂಗ್ರೆಸ್ ಪಕ್ಷ ಮಧ್ವರಾಜ್ ಅವರ ತಂದೆಯನ್ನು ಶಾಸಕರನ್ನಾಗಿ ಮಾಡಿತು. ತಾಯಿಯವರನ್ನು ಶಾಸಕಿ ಹಾಗೂ ಸಚಿವೆಯನ್ನಾಗಿ ಮಾಡಿತು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರೂ ಪ್ರಮೋದ್‌ರನ್ನು ಸಿದ್ಧರಾಮಯ್ಯ ಸಚಿವರನ್ನಾಗಿ ಮಾಡಿದರು. ಆದರೂ ಅವರು ಇದೆಲ್ಲವನ್ನೂ ಮರೆತು ಬಿಜೆಪಿ ಪಕ್ಷ ಸೇರಿದ್ದಾರೆ ಎಂದ ಡಿ.ಕೆ.ಶಿವಕುಮಾರ್, ಅವರಿಗೆ ಬಿಜೆಪಿ ಪಕ್ಷ ಈ ಬಾರಿ ಟಿಕೇಟ್ ನೀಡತ್ತೊ, ಇಲ್ಲವೊ ಗೊತ್ತಿಲ್ಲ. ಆದರೆ ಟಿಕೇಟ್ ನೀಡಿದಲ್ಲಿ ಅವರು ಎಲ್ಲೇ ಚುನಾವಣೆಗೆ ನಿಂತರೂ ಅವರನ್ನು ಜನರು ಸೋಲಿಸಬೇಕು ಎಂದರು.
ಪ್ರಮೋದ್ ಬಿಜೆಪಿ ಪಕ್ಷ ಸೇರುವಾಗ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಕಾರ್ಯಕರ್ತ ಆತನ ಹಿಂದೆ ಹೋಗಿಲ್ಲ. ಇದಕ್ಕಾಗಿ ನಾನು ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲವನ್ನೂ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದ ಪ್ರಮೋದ್ ಎಲ್ಲೇ ನಿಂತರೂ ಸೋಲುವುದನ್ನು ಖಚಿತ ಪಡಿಸಿ ಎಂದು ಡಿಕೆಶಿ ನುಡಿದರು.
ತಮ್ಮ ಭಾಷಣದ ವೇಳೆ ಇದೇ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಹಿಂದುತ್ವವಾದಿಗಳು. ಹಿಂದುಗಳ ಪರ ಇರುವವರಲ್ಲ. ನಾವು ಹಿಂದುಗಳ ಪರ ಇರುವವರು. ರಣದೀಪ್ ಸುರ್ಜೇವಾಲಾ, ಡಿಕೆ ಶಿವಕುಮಾರ್ ನಾವೆಲ್ಲ ಹಿಂದುಗಳಲ್ಲವೇ.. ಬಿಜೆಪಿಯವರಿಗೆ ಹಿಂದುಗಳು ಬೇಕಿಲ್ಲ. ಹಿಂದುತ್ವ ವಾದಿಗಳಷ್ಟೆ ಬೇಕು. ಇದನ್ನು ನಾವು ಒಪ್ಪಲ್ಲ. ಹಿಂದು ಅನ್ನೋದು ಎಲ್ಲವನ್ನು ಸ್ವೀಕಾರ ಮಾಡೋದು. ಆರೆಸ್ಸೆಸ್ ಮಂದಿ ಹೊಸ ಹಿಂದುತ್ವ ಹೇಳ್ತಾ ಇದೆಯಷ್ಟೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಕದಡುತ್ತಾ ಇದೆ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post