ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯಯ ಬಳಿಕ ಶಿವಮೊಗ್ಗ ನಗರದಾದ್ಯಂತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕೋಮು ಸೌಹಾರ್ದತೆಗೆ ಭಂಗ ತರುವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ, ಜೀವಹಾನಿ ಸಂಭವಿಸಬಹುದಾದ ಘಟನೆಗಳು ಯಾವುದೇ ಕ್ಷಣದಲ್ಲೂ ನಡೆಯಬಹುದಾದ ಸಾಧ್ಯತೆಯಿರುವುದರಿಂದ ಜಿಲ್ಲೆಯಲ್ಲಿ ಈಗಾಗಲೇ ಎರಡು ದಿನಗಳ ಕಾಲ ಕರ್ಫ್ಯೂ ಜಾರಿ ಮಾಡಲಾಗಿದೆ.
ಇಂದು ಕೂಡ ಶಿವಮೊಗ್ಗದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದಾದ್ಯಂತ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರು ವಾಹನದಲ್ಲಿ ಬಂದು ಮೈಕ್ ಮೂಲಕ, ನಾಗರಿಕರು ಯಾರೂ ಹೊರಗೆ ಬರಬಾರದು, ಗುಂಪಾಗಿ ನಿಲ್ಲಬಾರದು ಎಂದು ಅನೌನ್ಸ್ ಮೆಂಟ್ ಮಾಡುತ್ತಿರುವುದು ಕಂಡುಬಂತು.
ಯಾರೂ ಕೂಡ ಮನೆಯಿಂದ ಹೊರಗೆ ಬರಬಾರದು, ಅಂಗಡಿ-ಮುಂಗಟ್ಟುಗಳನ್ನು ತೆರೆಯಬಾರದು, ಜನರು ಬರಬಾರದು ಎಂದು ಅನೌನ್ಸ್ ಮೆಂಟ್ ನ್ನು ಇಡೀ ಶಿವಮೊಗ್ಗ ನಗರದಾದ್ಯಂತ ಮಾಡಲಾಗುತ್ತಿದೆ. ನಗರದ ಸೂಕ್ಷ್ಮ ಪ್ರದೇಶಗಳ ಪ್ರವೇಶಕ್ಕೆ ಜನರಿಗೆ ನಿರ್ಬಂಧ ವಿಧಿಸಲಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಬ್ಯಾರಿಕೇಡ್ ಗಳನ್ನು ಪೊಲೀಸರು ಅಳವಡಿಸಿದ್ದಾರೆ. ಬಿ.ಎಚ್.ರಸ್ತೆ ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಪೊಲೀಸ್ ಸರ್ಪಗಾವಲು: ಗಲಭೆ ಪೀಡಿತ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರವು ಮೂರು ಎಸ್ಪಿಗಳು, ಒಬ್ಬ ಹೆಚ್ಚುವರಿ ಎಸ್ಪಿ, 12 ಡಿವೈಎಸ್ಪಿಗಳು, 39 ಪಿಐಗಳು, 54 ಪಿಎಸ್ಐಗಳು, 48 ಎಎಸ್ಐಗಳು, 819 ಎಚ್ಸಿ/ಪಿಸಿಗಳು, 20 ಕೆಎಸ್ಆರ್ ಪಿ, ಬೆಟಾಲಿಯನ್ ಗಳು, 10 ಡಿಎಆರ್ ಬೆಟಾಲಿಯನ್ ಗಳು ಮತ್ತು ಒಂದು ಆರ್ ಎಫ್ ಎಫ್ ಬೆಟಾಲಿಯನ್ ಅನ್ನು ನಿಯೋಜಿಸಿದೆ.
ಸದ್ಯ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಶಿವಮೊಗ್ಗದ ಪರಿಸ್ಥಿತಿ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ನಿನ್ನೆ ಹರ್ಷನ ಕಗ್ಗೊಲೆ ನಂತರ ಮೃತದೇಹ ಮೆರವಣಿಗೆ ಹಿನ್ನೆಲೆಯಲ್ಲಿ ಉದ್ರಿಕ್ತರಿಂದ ಕಲ್ಲು ತೂರಾಟ ನಡೆಸಲಾಗಿದೆ. ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗದ ಹೊಳೆ ಬಸ್ ನಿಲ್ದಾಣದ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಶಿವಮೊಗ್ಗ ಬಿ.ಹೆಚ್. ರಸ್ತೆಯಲ್ಲಿ ಹಣ್ಣಿನ ಅಂಗಡಿ ಮೇಲೆ ಕಲ್ಲೆಸೆತವಾಗಿದೆ. ಶೋ ರೂಮ್, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ, ಅನೇಕ ಮನೆಗಳು, ಅಂಗಡಿ-ಮುಂಗಟ್ಟು, ವಾಹನಗಳು ಹಾನಿಗೀಡಾಗಿವೆ.
Discover more from Coastal Times Kannada
Subscribe to get the latest posts sent to your email.
Discussion about this post