ಬೆಂಗಳೂರು, ಫೆ 22: ನಾನು ಗೃಹ ಸಚಿವನಾಗಿದ್ದಾಗ ಬಜರಂಗದಳ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ಹಾಕಿಸಿದ್ದೆ ಎನ್ನುವ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕೆಂಡಾಮಂಡಲವಾಗಿದ್ದು, ವಿಪಕ್ಷ ನಾಯಕ ಸ್ಥಾನದಿಂದ ಅಶೋಕ್ ಅವರನ್ನು ತೆಗೆದು ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಪತ್ರ ಬರೆದು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆರ್ ಅಶೋಕ್, ಬಜರಂಗ ದಳದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆಶೋಕ್, ರಾಮನಗರದ ವಕೀಲರು ಜ್ಞಾನವಾಪಿ ದೇಗುಲ ಬಗ್ಗೆ ಪೋಸ್ಟ್ ಮಾಡಿದ್ರು. ಆ ವಿಚಾರವಾಗಿ ಪ್ರಸ್ತಾಪಿಸಿದ್ದೆ, ಮುಸ್ಲಿಮರು ಅಂತಾ ಓಲೈಕೆ ಮಾಡಬೇಡಿ. ಬಜರಂಗ ದಳ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ ಹಾಕಿಸಿದ್ದೆ ಎಂದೆ. ಬಜರಂಗ ದಳ, ಹಿಂದೂ ಕಾರ್ಯಕರ್ತರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ನಾನು ಕೂಡ 10 ವರ್ಷ ಬಜರಂಗ ದಳದಲ್ಲೇ ಇದ್ದವನು ಎಂದು ಹೇಳಿದರು. ಈ ಮೂಲಕ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮುಂದೆ ಮಂಡಿಯೂರಿದರು.
ಅಷ್ಟಕ್ಕೂ ಆರ್ ಅಶೋಕ್ ಹೇಳಿದ್ದೇನು? : ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಎಫ್‌ಐಆರ್ ಹಾಕಿರುವ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದ್ದರು. ಈ ವೇಳೆ, “ಮಂಗಳೂರು ಪಬ್ ದಾಳಿ ವೇಳೆ ನಾನು ರಾಜ್ಯದ ಗೃಹ ಸಚಿವನಾಗಿದ್ದೆ. ಇದೇ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಧರಣಿ ಕೂಡ ನಡೆದು, ದೊಡ್ಡ ಗಲಾಟೆಯೇ ಆಗಿತ್ತು. ಅವತ್ತು ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನನ್ನ ಮೇಲೆ ಭಾರೀ ಒತ್ತಡವಿತ್ತು. ಫೋನ್‌ಗಳು ಕೂಡ ಬಂದಿತ್ತು. ಆದರೂ ಕೂಡ ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಪಬ್ ದಾಳಿ ವೇಳೆ ಯುವತಿಯರ ಮೇಲೆ ದೌರ್ಜನ್ಯ ಎಸಗಿ ಬಜರಂಗದಳದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ಆ ಥರ ನೀವೂ ಕೂಡ ಕ್ರಮ ಕೈಗೊಳ್ಳಿ” ಎಂದು ಗೃಹ ಸಚಿವ ಪರಮೇಶ್ವರ್ಗೆ ಆಗ್ರಹಿಸಿದ್ದರು.
ಈ ಮೂಲಕ ತಾವು ಗೃಹ ಸಚಿವರಾಗಿದ್ದಾಗ ಹೇಗೆ ಇದ್ದೆ ಎನ್ನುವುದನ್ನು ತೋರಿಸಿಕೊಳ್ಳುವ ಭರದಲ್ಲಿ ಬಜರಂಗ ದಳ ವಿರುದ್ಧ ಗುಂಡಾ ಕೇಸ್ ಹಾಕಿದ್ದೆ ಎಂದು ಹೇಳಿಕೊಂಡಿದ್ದರು. ಆದ್ರೆ, ಈ ಹೇಳಿಕೆ ವಿಪಕ್ಷ ನಾಯಕ ಆರ್ ಅಶೋಕ್ಗೆ ತಿರುಗು ಬಾಣವಾಗಿದ್ದು, ಅಶೋಕ್ ವಿರುದ್ಧ ಬಜರಂಗದಳ ಕೆಂಡಾಮಂಡಲವಾಗಿತ್ತು. ಇದೀಗ ಕ್ಷಮೆ ಕೇಳುವ ಮೂಲಕ ಅಶೋಕ್ ಹಿಂದೂ ಸಂಘಟನೆಗಳ ಮುಂದೆ ಮಂಡಿಯೂರಿದ್ದಾರೆ,.
Discover more from Coastal Times Kannada
Subscribe to get the latest posts sent to your email.
Discussion about this post