ಮೈಸೂರು : ಕೇರಳ ಉದ್ಯಮಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ ಮೂವರು ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡುತ್ತಿದ್ದ ವೇಳೆ, ಒಬ್ಬ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಆರೋಪಿ ಹಾಗೂ ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ : ಕೆಲವು ದಿನಗಳ ಹಿಂದೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಹಳ್ಳಿ ಬಳಿ ದರೋಡೆ ನಡೆದಿತ್ತು. ಹಾಡ ಹಗಲೇ ಕೇರಳ ಮೂಲದ ಉದ್ಯಮಿಯನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಭಂಧಿಸಿದಂತೆ ಪೊಲೀಸರು ಈಗಾಗಲೇ 3 ಆರೋಪಿಗಳನ್ನು ಬಂಧಿಸಿದ್ದರು. ಕೆಲವು ದಿನ ಹಿಂದೆ ಮತ್ತೊಬ್ಬ ಆರೋಪಿ ಆದರ್ಶ್ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ದರೋಡೆಯಲ್ಲಿ ಆದರ್ಶ್ ಪಾತ್ರ ಸಹಾ ಪ್ರಮುಖವಾಗಿತ್ತು. ದರೋಡೆ ನಡೆದ ಸ್ಥಳದ ಬಳಿ ಪೊಲೀಸರಿಗೆ ಕ್ವಾಲಿಸ್ ಕಾರು ದೊರೆತಿತ್ತು. ಇದರ ಮಾಲೀಕ ಆದರ್ಶ್ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆದರ್ಶ್‌ಗಾಗಿ ಮೈಸೂರು ಜಿಲ್ಲಾ ಪೊಲೀಸರು ತಂಡಗಳನ್ನು ರಚಿಸಿದ್ದರು. ಆದರ್ಶ್ ಬಂಧನ ಸವಾಲಾಗಿತ್ತು. ಕೊನೆಗೂ ಎರಡು ದಿನಗಳ ಹಿಂದೆ ಆದರ್ಶ್ ಪೊಲೀಸರ ಬಲೆಗೆ ಬಿದ್ದಿದ್ದ. ಮೈಸೂರಿಗೆ ಕರೆ ತಂದ ಪೊಲೀಸರು ಈತನ ಕಾರು ದೊರೆತ ಸ್ಥಳಕ್ಕೆ ಮಹಜರ್‌ಗಾಗಿ ಕರೆದುಕೊಂಡು ಹೋಗಿದ್ದರು.
ಆದರ್ಶ್ ಬಂಧಿಸಿದ ಪೊಲೀಸರು ಸ್ಥಳ ಮಹಜರಿಗಾಗಿ ಆದರ್ಶ್ ಕಾರು ಸಿಕ್ಕ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಜಯಪುರ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಬೈಲುಕುಪ್ಪೆ, ಇನ್ಸಪೆಕ್ಟರ್ ದೀಪಕ್ ಹಾಗೂ ಇಬ್ಬರು ಸಿಬ್ಬಂ ಕರೆದೊಯ್ದಿದ್ದರು. ಕಾರು ಪತ್ತೆಯಾದ ಸ್ಥಳವನ್ನು ಆದರ್ಶ್ ಗುರುತಿಸಿದ್ದಾನೆ. ನಂತರ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಯಲ್ಲಿ ನಿಂತಿದ್ದಾನೆ. ಅಲ್ಲಿ ಯಾರೋ ಕುಡಿದು ಬಿಸಾಕಿದ್ದ ಬಿಯರ್ ಬಾಟಲಿ ಈತನ ಕೈಗೆ ಸಿಕ್ಕಿದೆ. ಬಾಟಲಿಯನ್ನು ತೆಗೆದುಕೊಂಡು ಅದನ್ನು ಒಡೆದು ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಹರೀಶ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಪ್ರಕಾಶ್ ಸಾಕಷ್ಟು ಬಾರಿ ಶರಣಾಗುವಂತೆ ಮನವಿ ಮಾಡಿದರೂ ಕೇಳಿಲ್ಲ. ನಿರಂತರ ದಾಳಿ ಮುಂದುವರಿಸಿದ್ದಾನೆ. ಈ ವೇಳೆ ಜೊತೆಯಲ್ಲಿದ್ದ ಬೈಲುಕುಪ್ಪೆ ಇನ್ಸ್ಪೆಕ್ಟರ್ ದೀಪಕ್ ಆತ್ಮರಕ್ಷಣೆಗಾಗಿ ತಮ್ಮಲ್ಲಿದ್ದ ಪಿಸ್ತೂಲ್ನಿಂದ ಆದರ್ಶ್ ಮೇಲೆ ಗುಂಡು ಹಾರಿಸಿದ್ದಾರೆ. ಆದರ್ಶ್ ಎಡಗಾಲಿಗೆ ಗುಂಡು ತಗುಲಿ ಬಿದ್ದಿದ್ದಾನೆ. ಗಾಯಗೊಂಡ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಹಾಗೂ ಹರೀಶ್ ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕಾಶ್, ಹರೀಶ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಗುಂಡು ತಗುಲಿದ ಆದರ್ಶ್ನನ್ನು ಮೇಟಗಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಅಡಿಷನಲ್ ಎಸ್ಪಿ ಮಲ್ಲಿಕ್, ಡಿವೈಎಸ್‌ಪಿ ಕರೀಂ ರಾವತರ್, ಸರ್ಕಲ್ ಇನ್ಸ್ಪೆಕ್ಟರ್ ಶೇಖರ್ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post