ಬಂಟ್ವಾಳ: ಕರ್ನಾಟಕದ ಸ್ಪೈಡರ್ ಮ್ಯಾನ್ ಎಂದೇ ಗುರುತಿಸಲ್ಪಟ್ಟ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಅವರು ಭಾನುವಾರ ಬೆಳಗ್ಗೆ ಬಂಟ್ವಾಳ ಸಮೀಪದ ಕಾರಿಂಜೇಶ್ವರ ಬೆಟ್ಟವನ್ನು ಬರಿಗೈಯಲ್ಲಿ ಕೆಲವೇ ನಿಮಿಷಗಳಲ್ಲಿ ಏರುವ ಮೂಲಕ ಗಮನ ಸೆಳೆದಿದ್ದಾರೆ. ಮೊದಲ ಬಾರಿಗೆ ಈ ಬೆಟ್ಟವನ್ನೇರಿದ ಜ್ಯೋತಿರಾಜ್ ಸಾಹಸಕ್ಕೆ ನೆರೆದಿದ್ದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಬೆಳಗ್ಗೆ 10 ಗಂಟೆಗೆ ಪುರಾಣ ಪ್ರಸಿದ್ಧ ಕಾರಿಂಜೇಶ್ವರನ ಬೆಟ್ಟದ ಮೇಲೆ ಹತ್ತಲು ಆರಂಭಿಸಿದ ಜ್ಯೋತಿರಾಜ್, ಸುಡುವ ಬಿಸಲನ್ನೂ ಲೆಕ್ಕಿಸದೆ ಕೇವಲ ಅರ್ಧ ಗಂಟೆಗೂ ಕಡಿಮೆ ಅವಧಿಯಲ್ಲೇ ಬೆಟ್ಟದ ಮೇಲಿನ ಈಶ್ವರನ ದೇವಾಲಯದ ಮುಂದೆ ತಲುಪಿ ದೇವರಿಗೆ ನಮಸ್ಕರಿಸಿದರು. ನೋಡ ನೋಡುತ್ತಿದ್ದಂತೆ ಬೆಟ್ಟ ಏರಿದ ಜ್ಯೋತಿರಾಜ್ ಅವರ ಕಸರತ್ತು ಜನರ ಮೈಜುಮ್ಮೆನಿಸುವಂತಿತ್ತು.
350 ಅಡಿ ಎತ್ತರದ ಬಂಡೆ: ಜ್ಯೋತಿರಾಜ್ ಏರಿದ ಕಾರಿಂಜ ಬೆಟ್ಟದ ಬೃಹತ್ ಬಂಡೆಯು ಸುಮಾರು 350 ಅಡಿ ಎತ್ತರವಿದೆ. ಯೂಟ್ಯೂಬ್ನಲ್ಲಿ ಶಿವರಾತ್ರಿ ಹಬ್ಬದ ವಿಡಿಯೋ ನೋಡುತ್ತಿದ್ದಾಗ ಕಾರಿಂಜ ಕ್ಷೇತ್ರದ ಕುರಿತು ತಿಳಿದಿದ್ದ ಅವರು, ಸಾಕಷ್ಟು ಜನರ ಬೇಡಿಕೆಯಂತೆ ಬೆಟ್ಟ ಹತ್ತಲು ನಿರ್ಧರಿಸಿದ್ದರು. ಶನಿವಾರವೇ ಇದಕ್ಕಾಗಿ ಪ್ರಾಕ್ಟೀಸ್ ಕೂಡ ಮಾಡಿದ್ದರು. ಆಗ ಬೆಟ್ಟವೇರಲು ಒಂದು ತಾಸು ತೆಗೆದುಕೊಂಡಿದ್ದ ಅವರು, ಭಾನುವಾರ ಅರ್ಧ ಗಂಟೆಯಲ್ಲೇ ಕ್ರಮಿಸಿದರು.
11 ಬಾರಿ ಆಪರೇಷನ್, ಕೈ ಕಾಲಿಗೆ ರಾಡ್ ! ”ಶವಗಳನ್ನು ಹುಡುಕಲು ಅನೇಕ ಬಾರಿ ಜೋಗ ಜಲಪಾತದಲ್ಲಿ ಇಳಿದು, ಬಳಿಕ ಏರಿದ್ದೇನೆ. ಒಮ್ಮೆ ಜಲಪಾತದ ಕಂದಕಕ್ಕೆ ಬಿದ್ದು, ಎರಡು ದಿನ ಕಾಣೆಯಾಗಿದ್ದೆ. ಇಲ್ಲಿಯ ತನಕ ಗಾಯಗಳಿಂದ ನನಗೆ ಒಟ್ಟು 11 ಆಪರೇಷನಗಳು ಆಗಿವೆ. ಕೈ, ಕಾಲಿಗೆ 4 ರಾಡ್ ಹಾಕಿಸಿಕೊಂಡಿದ್ದೇನೆ. ಆದರೆ, ಬಂಡೆಗಳನ್ನು ಹತ್ತಿ ಬಿದ್ದಿರುವುದು ಕಡಿಮೆ. ಬೇರೆಯವರನ್ನು ಕಾಪಾಡಲು ಹೋದಾಗಲೇ ಬಿದ್ದು ಗಾಯಳಾಗಿರುವುದ ಹೆಚ್ಚು. ಜೋಗದಲ್ಲೇ ಒಟ್ಟು 9 ಮೃತದೇಹಗಳನ್ನು ಹೊರತೆಗೆದಿದ್ದೇನೆ. ಜಲಪಾತವನ್ನು 18 ಬಾರಿ ಇಳಿದು, ಏರಿದ್ದೇನೆ. ಈ ಪೈಕಿ 3 ಬಾರಿ ಶೂಟಿಂಗ್ ಸಂಬಂಧ ಹತ್ತಿದ್ದೆ. ಅಲ್ಲದೆ, ಕೆರೆ, ಬಾವಿಯಲ್ಲಿ ಯಾರೇ ಬಿದ್ದಾಗಲೂ ನೆರವಾಗಿದ್ದೇನೆ” ಎಂದು ಜ್ಯೋತಿರಾಜ್ ವಿವರಿಸಿದರು.
ಮಂಗಳೂರಿನಲ್ಲಿ ಎತ್ತರದ ಬಹುಮಹಡಿ ಕಟ್ಟಡ ಏರಬೇಕೆಂಬ ಬಯಕೆ ಕಳೆದ ವರ್ಷ ಬೆಳ್ತಂಗಡಿಯ ಗಡಾಯಿಕಲ್ಲು ಬೆಟ್ಟ ಹತ್ತಿದ್ದೆ. ಹಾಗೆಯೇ ಉಡುಪಿ, ಮಂಗಳೂರಿನ ಬಹುಮಹಡಿಯ ಕಟ್ಟಡವನ್ನು ಏರಿದ್ದೇನೆ. ಅದರಲ್ಲಿ ಬಂದ ಹಣದಿಂದ ರೋಪು, ಸೇಫ್ಟಿ ಜಾಕೆಟ್ ಖರೀದಿಸಿದ್ದೇನೆ. ಮಲೆನಾಡು ನನಗೆ ಅತ್ಯಂತ ಇಷ್ಟದ ಊರು. ನಾನು ದೈವ, ದೇವರಲ್ಲಿ ನಂಬಿಕೆಯುಳ್ಳವ. ಧರ್ಮಸ್ಥಳ, ಕೊರಗಜ್ಜನ ಕ್ಷೇತ್ರ ಸೇರಿ ಹಲವು ದೈವ, ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ. ಮಂಗಳೂರಿನಲ್ಲಿರುವ ಅತಿ ಎತ್ತರದ ಬಹುಮಹಡಿ ಕಟ್ಟಡವನ್ನು ಏರಬೇಕೆಂಬ ಬಯಕೆ ಇದೆ. ಕಳೆದ ಬಾರಿ ಇದಕ್ಕೆ ಸಂಬಂಧಪಟ್ಟವರಿಂದ ಅನುಮತಿ ಕೋರಿದ್ದೆ, ಆದರೆ ಸಿಕ್ಕಿರಲಿಲ್ಲ. ಈ ಸಲವೂ ಅನುಮತಿ ಕೇಳಿದ್ದು, ಇದುವರೆಗೆ ಸಿಕ್ಕಿಲ್ಲ” ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post