ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಸುಮಾರು 1.1 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಏರ್‌ಪೋರ್ಟ್ ಕಸ್ಟಮ್ಸ್‌ನ ವಾಯು ಗುಪ್ತಚರ ವಿಭಾಗವು ವಿಮಾನದಲ್ಲಿ ಅಡಗಿಸಿಟ್ಟು ಬಿಟ್ಟುಹೋಗಿದ್ದ ಸುಮಾರು 1 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನದಲ್ಲಿ ಶೋಧ ನಡೆಸಿದಾಗ 15 ಚಿನ್ನದ ಬಿಸ್ಕತ್ ಗಳು ಕಂಡುಬಂದವು. ಇದು 24ಕ್ಯಾರೆಟ್ ಚಿನ್ನವಾಗಿದ್ದು, ಇದರ ಬೆಲೆ ಸುಮಾರು 49.6 ಲಕ್ಷ ರೂ. ಮೌಲ್ಯದ್ದು ಎನ್ನಲಾಗಿದೆ. ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬೀಳುವ ಭಯದಿಂದ ಚಿನ್ನವನ್ನು ವಿಮಾನದಲ್ಲಿಯೇ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.