ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ಸಂತ್ರಸ್ತ, ಆಟೊ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಸೋಮವಾರ ತಿಳಿಸಿದ್ದಾರೆ. ಜನಪ್ರತಿನಿಧಿಗಳು ಭೇಟಿಯಾಗಿ ಸಾಂತ್ವನವನ್ನೂ ಹೇಳಿದ್ದಾರೆ. ಆದರೂ ಪುರುಷೋತ್ತಮ ಅವರ ಮನೆಮಂದಿಯಲ್ಲಿ ಮೂಡಿರುವ ಆತಂಕ ಕಡಿಮೆಯಾಗಿಲ್ಲ.

ಶನಿವಾರ ಸಂಜೆ ನಡೆದ ಸ್ಫೋಟದಲ್ಲಿ ಪುರುಷೋತ್ತಮ ಗಾಯಗೊಂಡ ವಿಷಯ ತಿಳಿದಾಗ ಗಾಬರಿಯಾದ ಕುಟುಂಬದವರು ಘಟನೆ ಭಯೋತ್ಪಾದನಾ ಕೃತ್ಯ ಎಂದು ಭಾನುವಾರ ಸಾಬೀತಾ ಗುತ್ತಿದ್ದಂತೆ ಇನ್ನಷ್ಟು ಕುಗ್ಗಿಹೋದರು. ಅವರೆಲ್ಲರೂ ಆಸ್ಪತ್ರೆಗೆ ಧಾವಿಸಿರುವುದರಿಂದ ಭಾನುವಾರದಿಂದ ಮನೆಗೆ ಬೀಗ ಹಾಕಲಾಗಿದೆ. ಪತ್ನಿ ಚಿತ್ರ, ಮಕ್ಕಳು ಮೇಘಶ್ರೀ ಮತ್ತು ವಿನ್ಯಶ್ರೀ ಅವರು ಪುರುಷೋತ್ತಮ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತ ಆಸ್ಪತ್ರೆಯ ಆವರಣದಲ್ಲೇ ಕಾಲ ದೂಡುತ್ತಿದ್ದಾರೆ. ನಗರದ ಉಜ್ಜೋಡಿ–ಗೋರಿಗುಡ್ಡದಲ್ಲಿ ಪುರುಷೋತ್ತಮ ಅವರ ಮನೆ. ಈ ಮನೆಯಲ್ಲಿ ಭಾರಿ ಸೌಲಭ್ಯಗಳೇನೂ ಇಲ್ಲ. ಪಿತ್ರಾರ್ಜಿತವಾಗಿ ಲಭಿಸಿರುವ ಸಣ್ಣ ಜಾಗದಲ್ಲಿ ಪುರುಷೋತ್ತಮ ಮತ್ತು ಸಹೋದರ, ಗ್ಯಾರೇಜ್ ನಡೆಸುತ್ತಿರುವ ನಾಗೇಶ್ ಒಂದೇ ಕಟ್ಟಡದಲ್ಲಿ ಎರಡು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

‘ಪುರುಷೋತ್ತಮ ಪೂಜಾರಿ ಅವರು ಭಯೋತ್ಪಾದನಾ ಕೃತ್ಯದ ಸಂತ್ರಸ್ತ. ಈ ಘಟನೆಯಿಂದ ತುಂಬ ನಷ್ಟ ಅನುಭವಿಸಿದ್ದಾರೆ. ಸ್ಪೋಟದಿಂದ ಅವರ ದೇಹದ ಶೇ 25ರಷ್ಟು ಭಾಗ ಸುಟ್ಟು ಹೋಗಿದೆ. ರಿಕ್ಷಾಕ್ಕೂ ಹಾನಿಯಾಗಿದೆ. ಅವರಿಗೆ ಗುಣಮಟ್ಟದ ಚಿಕಿತ್ಸೆಗೆ ಒದಗಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಕೊಡಿಸುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ. ಕುಟುಂಬದ ಸದಸ್ಯರ ಜೊತೆಗೂ ಮಾತನಾಡಿದ್ದೇವೆ’ ಎಂದು ಅಲೋಕ್ ಕುಮಾರ್ ಹೇಳಿದರು.
ಮಗಳಿಗೆ ಮದುವೆ ನಿಶ್ಚಯ: ಪುರುಷೋತ್ತಮ ಅವರ ಹಿರಿಯ ಪುತ್ರಿ ಮೇಘಶ್ರೀ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಪುತ್ರಿ ವಿನ್ಯಶ್ರೀ ವಿದ್ಯಾರ್ಥಿನಿ. ಮೇಘಶ್ರೀ ಅವರಿಗೆ ಮೂಲ್ಕಿಯ ಗಂಡಿನೊಂದಿಗೆ ಮದುವೆ ನಿಶ್ಚಯವಾಗಿದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬೇಕಿರುವ ಮದುವೆಯ ಕನಸಿನಲ್ಲಿದ್ದ ಕುಟುಂಬಕ್ಕೆ ಕುಕ್ಕರ್ ಬಾಂಬ್ ಪ್ರಕರಣ ಆಘಾತ ನೀಡಿದೆ. ‘ಆಟೊ ಖರೀದಿಸಲು ಮಾಡಿರುವ ಸಾಲ ಮುಗಿಯುತ್ತ ಬಂದಿದೆ. ಮಗಳ ಮದುವೆಯ ಕನಸು ನನಸಾಗಿಸುವುದಕ್ಕಾಗಿ ಶ್ರಮಪಟ್ಟು ದುಡಿಯುತ್ತಿದ್ದರು. ಈಗ ಆರೋಗ್ಯಕ್ಕೂ– ಆಟೊಗೂ ಹಾನಿ ಆಗಿದೆ. ಭವಿಷ್ಯವು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ. ಸರ್ಕಾರ ನೆರವು ನೀಡಬೇಕು’ ಎಂದು ನಾಗೇಶ್ ಕೋರಿದರು.

Discover more from Coastal Times Kannada
Subscribe to get the latest posts sent to your email.







Discussion about this post