ದೋಹಾ: ಮಾಜಿ ಚಾಂಪಿಯನ್ ಇಂಗ್ಲೆಂಡ್ ತಂಡ ಫಿಫಾ ವಿಶ್ವ ಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಸೋಮವಾರದ ಈ ಮುಖಾಮುಖಿಯಲ್ಲಿ ಇರಾನ್ ತಂಡದ ಮೇಲೆ ಸವಾರಿ ಮಾಡಿ 6-2 ಗೋಲುಗಳ ಅಧಿಕಾರಯುತ ಗೆಲುವು ದಾಖಲಿಸಿದೆ.
ಬುಕಾಯೊ ಸಾಕಾ ಎರಡು ಗೋಲುಗಳನ್ನು ತಂದಿತ್ತರೆ, ಜೂಡ್ ಬೆಲಿಂಗಮ್, ರಹೀಮ್ ಸ್ಟರ್ಲಿಂಗ್, ಮಾರ್ಕಸ್ ರಶ್‌ಫೋರ್ಡ್ ಮತ್ತು ಜಾಕ್ ಗ್ರೀಲಿಶ್ ಅವರು ತಲಾ ಒಂದು ಗೋಲು ತಂದಿತ್ತರು. ಮೊದಲ ಅರ್ಧ ಗಂಟೆಯ ಆಟದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನೀಡಿದವು. ಇದರಿಂದ ಆರಂಭದಲ್ಲಿ ಗೋಲು ಬರಲಿಲ್ಲ. 35ನೇ ನಿಮಿಷದಲ್ಲಿ ಇಂಗ್ಲೆಂಡ್ ಗೋಲಿನ ಖಾತೆ ತೆರೆಯಿತು. ಲೂಕ್ ಶಾ ನೀಡಿದ ನಿಖರ ಪಾಸ್‌ನಲ್ಲಿ ಚೆಂಡನ್ನು ಹೆಡ್ ಮಾಡಿದ ಬೆಲಿಂಗಮ್ ಗುರಿ ಸೇರಿಸಿದರು.
ಮೊದಲ ಗೋಲು ಬಿದ್ದದ್ದೇ ತಡ, ಆಟದ ಚಿತ್ರಣವೇ ಬದಲಾಯಿತು. ಅದುವರೆಗೂ ನಿಧಾನಗತಿಯ ಆಟವಾಡುತ್ತಿದ್ದ ಇಂಗ್ಲೆಂಡ್ ಆಟಗಾರರು ಎದುರಾಳಿ ತಂಡದ ಗೋಲುಪೆಟ್ಟಿಗೆ ಗುರಿಯಾಗಿಸಿ ಮೇಲಿಂದ ಮೇಲೆ ದಾಳಿ ನಡೆಸಿದರು. ಎಂಟು ನಿಮಿಷಗಳ ಬಳಿಕ ಇಂಗ್ಲೆಂಡ್ ಮುನ್ನಡೆಯನ್ನು ಹೆಚ್ಚಿಸಿತು. ಹ್ಯಾರಿ ಮಗುಯೆರ್ ಅವರು ಹೆಡರ್ ಮೂಲಕ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ಬುಕಾಯೊ ಸಾಕಾ ಗುರಿ ಸೇರಿಸಿದರು. ವಿರಾಮಕ್ಕೆ ತೆರಳಲು ಕೆಲವೇ ನಿಮಿಷಗಳಿದ್ದಾಗ ಸ್ಟರ್ಲಿಂಗ್ (45+1) ತಮ್ಮ ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. ನಾಯಕ ಹ್ಯಾರಿ ಕೇನ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಅವರು ಯಾವುದೇ ತಪ್ಪು ಮಾಡಲಿಲ್ಲ.
ಎರಡನೇ ಅವಧಿಯಲ್ಲೂ ಇಂಗ್ಲೆಂಡ್‌ನ ಪ್ರಾಬಲ್ಯ ಮುಂದುವರಿಯಿತು. 62ನೇ ನಿಮಿಷದಲ್ಲಿ ಸಾಕಾ ತಮ್ಮ ಎರಡನೇ ಗೋಲು ಗಳಿಸಿದರು. ಇರಾನ್‌ನ ಡಿಫೆಂಡರ್‌ಗಳನ್ನು ಚಾಣಾಕ್ಷತನದಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು. ಇದಾದ ಮೂರು ನಿಮಿಷಗಳ ಬಳಿಕ ಮೆಹ್ದಿ ತರೆಮಿ ಅವರು ಗೋಲು ಗಳಿಸಿ ಇರಾನ್‌ನ ಹಿನ್ನಡೆಯನ್ನು 1–4ಕ್ಕೆ ತಗ್ಗಿಸಿದರು. ಆದರೆ ರಶ್‌ಫೋರ್ಡ್ (71ನೇ ನಿ.) ಹಾಗೂ ಗ್ರೀಲಿಶ್ (90ನೇ ನಿ.) ಅವರು ಗೋಲು ಗಳಿಸಿ ಇಂಗ್ಲೆಂಡ್‌ನ ಗೆಲುವಿನ ಅಂತರ ಹಿಗ್ಗಿಸಿದರು. ಪಂದ್ಯ ಕೊನೆಗೊಳ್ಳಲು ಕೆಲವು ಸೆಕೆಂಡುಗಳು ಇರುವಾಗ ತರೆಮಿ ತಮ್ಮ ಹಾಗೂ ತಂಡದ ಎರಡನೇ ಗೋಲು ಗಳಿಸಿದರು.
🏴🦁 @England are in the Group B driver's seat #FIFAWorldCup | #Qatar2022
— FIFA World Cup (@FIFAWorldCup) November 21, 2022
Discover more from Coastal Times Kannada
Subscribe to get the latest posts sent to your email.
Discussion about this post