ಮಂಗಳೂರು: ಪಕ್ಕದ ಮನೆಯ ಕಾರ್ಯಕ್ರಮ ಮುಗಿಸಿ ಮನೆಗೆ ಬರಲು ಗಂಡ ತಡ ಮಾಡಿದರು ಎಂಬ ಕಾರಣಕ್ಕೆ ಅಸಮಾಧಾನಗೊಂಡ ಪತ್ನಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಬಾಳ ಗ್ರಾಮದ ಒಟ್ಟೆಕಾಯಾರ್ ಮನೆಯ ಹರೀಶ್ ಅವರ ಪತ್ನಿ ದಿವ್ಯಾ (26) ಎಂದು ಗುರುತಿಸಲಾಗಿದೆ. ಈ ಬಗ್ಗೆ ದಿವ್ಯಾ ಅವರ ತಾಯಿ, ಕೋಟೆಕಾರ್ ಮಾಡೂರಿನ ಗಿರಿಜಾ ಪೂಜಾರಿ ಅವರು ಸುರತ್ಕಲ್ ಠಾಣೆ ಗೆ ದೂರು ನೀಡಿದ್ದಾರೆ.
‘ಮಗಳು ದಿವ್ಯಾ ನಗರದ ಲೇಡಿಹಿಲ್ ನ ಔಷಧಾಲಯವೊಂದರಲ್ಲಿ ಕೆಲಸಮಾಡುತ್ತಿದ್ದಳು. ಮೊಗವೀರ ಯುವಕ ಹರೀಶ್ ಅವರನ್ನು ಪ್ರೀತಿಸಿದ್ದಳು. ನಗರದ ಆರ್ಯ ಸಮಾಜದಲ್ಲಿ 2022 ಮಾರ್ಚ್ 24ರಂದು ಅವರಿಬ್ಬರು ಸರಳವಾಗಿ ಮದುವೆಯಾಗಿದ್ದರು. ನಮಗೆ ವಿಷಯ ಗೊತ್ತಾದ ಬಳಿಕ ನಾವೂ ಅವರ ಮನೆಗೆ ಹೋಗಿ ಬರುತ್ತಿದ್ದೆವು. ದಂಪತಿ ಅನ್ಯೋನ್ಯವಾಗಿದ್ದರು.’ ಎಂದು ತಾಯಿ ಹೇಳಿದ್ದಾರೆ.
‘ಮಗಳು ಮುಂಗೋಪಿ ಸ್ವಭಾವದವಳು. ನೆರೆಮನೆಯಲ್ಲಿ ಶನಿವಾರ ನಡೆದಿದ್ದ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಟ್ಟಿಗೆ ಭಾಗವಹಿದ್ದರು. ಅಲ್ಲಿಂದ ಮನೆಗೆ ಹೊರಡುವಾಗ ಹರೀಶ ತಡ ಮಾಡಿದ್ದರು. ಈ ಕಾರಣದಿಂದ ಅಸಮಾಧಾನಗೊಂಡಿದ್ದ ದಿವ್ಯಾ ಒಬ್ಬಳೇ ಮನೆಗೆ ಮರಳಿದ್ದಳು. ಭಾನುವಾರ ಸಂಜೆ 3 ರಿಂದ 4 ಗಂಟೆ ನಡುವೆ ಮನೆಯ ಬೆಡ್ ರೂಮ್ ಕಿಟಕಿಯಲ್ಲಿ ಶಾಲನ್ನು ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಈ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ’ ಎಂದು ಗಿರಿಜಾ ಪೂಜಾರಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post