ಉಳ್ಳಾಲ, ಜೂ.23: ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಕೊಟ್ಯ ಎಂಬಲ್ಲಿ ಜೂ.18ರ ಮಧ್ಯರಾತ್ರಿ ಆಗಂತುಕರ ತಂಡವೊಂದು ನಾಲ್ಕು ಮನೆಗಳ ಬಾಗಿಲು ತಟ್ಟಿದ್ದು, ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟುವಿನ ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ಶುಕ್ರವಾರ ರಾತ್ರಿ ದರೋಡೆ ನಡೆಸಿದ ತಂಡವೇ ಉಳ್ಳಾಲದಲ್ಲೂ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬಂಡಿಕೊಟ್ಯದ ನಾಲ್ಕು ಮನೆಗಳ ಬಾಗಿಲುಗಳನ್ನು ಆಗಂತುಕರ ತಂಡವೊಂದು ನಡುರಾತ್ರಿ ಬಡಿದಿದೆ ಎನ್ನಲಾಗಿದೆ. ಬಾಗಿಲನ್ನ ಜೋರಾಗಿ ಬಡಿಯುತ್ತಿರುವುದನ್ನ ಗ್ರಹಿಸಿ ಭಯಭೀತರಾದ ಮನೆಮಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು ಈ ವೇಳೆ ಆಗಂತುಕರ ತಂಡ ಪರಾರಿಯಾಗಿದೆ. ಶುಕ್ರವಾರ ಉಳಾಯಿಬೆಟ್ಟುವಿನ ಉದ್ಯಮಿ ಮನೆಯಲ್ಲಿ ನಡೆದಿರುವ ದರೋಡೆ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಉಳ್ಳಾಲ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಉಳಾಯಿಬೆಟ್ಟುವಿನಲ್ಲಿ ದರೋಡೆ ನಡೆಸಿದ ತಂಡವೇ ಉಳ್ಳಾಲದಲ್ಲೂ ದರೋಡೆಗೆ ವಿಫಲ ಯತ್ನ ನಡೆಸಿತ್ತೇ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಉಳ್ಳಾಲದಲ್ಲಿ ನಡೆದಿರುವ ಘಟನೆ ಬಗ್ಗೆ ಯಾರೂ ಠಾಣೆಗೆ ದೂರು ನೀಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಉಳ್ಳಾಲದ ನಿವಾಸಿಗಳಿಗೆ ಪೊಲೀಸ್ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ಎಚ್ಚರಿಕೆಯ ಪ್ರಕಟಣೆ ಹೊರಡಿಸಿದ್ದಾರೆ. ಉಳ್ಳಾಲದಲ್ಲಿ ಕಳೆದ ಕೆಲವು ದಿನಗಳಿಂದ ಅಪರಿಚಿತ ಏಳೆಂಟು ಜನರ ತಂಡವು ಒಂಟಿ ಮನೆ ಹಾಗೂ ಬೀಗ ಜಡಿದಿರುವ ನಿವಾಸಗಳಿಗೆ ತೆರಳುತ್ತಿರುವ ಬಗ್ಗೆ ಗುಪ್ತಚರ ಮೂಲದ ಮಾಹಿತಿ ಲಭ್ಯವಾಗಿದೆ. ಠಾಣಾ ವ್ಯಾಪ್ತಿಯ ನಿವಾಸಿಗಳು ಈ ವಿಚಾರದಲ್ಲಿ ಸದಾ ಎಚ್ಚರದಿಂದ ಇರಬೇಕು. ಸಮರ್ಪಕ ದಾಖಲೆಗಳಿಲ್ಲದೆ ಯಾರಿಗೂ ಬಾಡಿಗೆ ಮನೆ ನೀಡುವಂತಿಲ್ಲ. ಮನೆಗೆ ಯಾರಾದರೂ ಬಂದರೆ ಪರಿಶೀಲಿಸಿ ಬಾಗಿಲು ತೆಗೆಯಬೇಕು. ಅಪರಿಚಿತರ ಬಗ್ಗೆ ಸಂಶಯ ಬಂದಲ್ಲಿ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ 9480802315 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post