ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಗುರುವಾರ ಆರಂಭವಾಗಿದೆ.
ಮೇಯರ್ ಹಾಗೂ ಆಯುಕ್ತರ ಸೂಚನೆಯಂತೆ ಕಂದಾಯ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ಸ್ಟೇಟ್‌ಬ್ಯಾಂಕ್ ಭಾಗದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮುಂದಕ್ಕೆ ಸೆಂಟ್ರಲ್ ಮಾರುಕಟ್ಟೆ, ಕಂಕನಾಡಿ ಭಾಗದಲ್ಲಿ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆಗೆ ವ್ಯಾಪಾರಿಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ತಮ್ಮ ಬಳಿ ಬೀದಿಬದಿ ವ್ಯಾಪಾರ ಮಾಡಲು ಪಾಲಿಕೆ ನೀಡಿರುವ ಕಾರ್ಡ್ ಇದೆ ಎಂದು ಕೆಲವು ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ. ಬೀದಿಬದಿ ವ್ಯಾಪಾರದ ಕಾರ್ಡ್ ಒಂದೇ ಕಡೆಯಲ್ಲಿ ಅಂಗಡಿ ಮಾಡುವುದಕ್ಕೆ ಇರುವುದಲ್ಲ. ತಳ್ಳುಗಾಡಿಯಲ್ಲಿ ವಿವಿಧೆಡೆ ತೆರಳಿ ಮಾರಾಟ ಮಾಡುವುದಕ್ಕೆ. ಒಂದೇ ಕಡೆಯಲ್ಲಿ ನಿಂತು ಮಾರಾಟ ಮಾಡುವುದು ನಿಯಮದ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಅಂಗಡಿಗಳನ್ನು ಸ್ಥಳದಲ್ಲೇ ತುಂಡರಿಸಿ, ಲಾರಿಗಳ ಗಳಲ್ಲಿ ತುಂಬಿಸಿ ತಗೆದುಕೊಂಡು ಹೋಗಲಾಗುತ್ತಿದೆ. ಇದೇ ವೇಳೆ ಯಾವುದೇ ಮುನ್ಸೂಚನೆ ನೀಡದೆ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ವಿರೋಧವೂ ವ್ಯಕ್ತವಾಗಿದೆ.