ರಾಜಸ್ಥಾನ: ಜೈಪುರದ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಇಬ್ಬರು ಅಪರಾಧಿಗಳ ನಡುವೆ ಪ್ರೇಮ ಚಿಗುರೊಡೆದಿದ್ದು, ಇದೀಗ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ. ಇದಕ್ಕಾಗಿ ಅವರಿಗೆ ಪೆರೋಲ್ ಸಹ ಸಿಕ್ಕಿದೆ.
ಡೇಟಿಂಗ್ ಆ್ಯಪ್ ಮೂಲಕ ವ್ಯಕ್ತಿಯೊಬ್ಬನನ್ನು ಟ್ರ್ಯಾಪ್ ಮಾಡಿ ಆತನನ್ನು ಕೊಂದು ಸೂಟ್ಕೇಸ್ನಲ್ಲಿ ತುಂಬಿದ ಪ್ರಕರಣದಲ್ಲಿ ಜೀವವಾಧಿ ಶಿಕ್ಷೆಗೆ ಒಳಗಾಗಿರುವ ಪ್ರಿಯಾ ಸೇಠ್ (34) ಹಾಗೂ ಮಹಿಳೆಯೊಂದಿಗೆ ಅಕ್ರಮ ಸಂಬಂಧದಿಂದ ಆಕೆಯ ಪತಿ ಮತ್ತು ಮಗುವನ್ನು ಕೊಂದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹನುಮಾನ್ ಪ್ರಸಾದ್ (29) ಮದುವೆಗೆ ನಿಶ್ಚಯಿಸಿದ್ದಾರೆ.
ಸಂಗನೇರ್ ಕಾರಾಗೃಹದಲ್ಲಿದ್ದ ಇವರಿಬ್ಬರು ಇದೀಗ ಪ್ರೀತಿಸಿ, ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಅನುಸಾರ ಪೆರೋಲ್ ಸಿಕ್ಕಿದ್ದು, ಅವರನ್ನು 15 ದಿನಗಳ ಕಾಲ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜನವರಿ 7ರಂದು ರಾಜಸ್ಥಾನ ಹೈಕೋರ್ಟ್‌ನ ನಿರ್ದೇಶನದ ಅನುಸಾರ ಜಿಲ್ಲಾ ಪೆರೋಲ್ ಸಲಹಾ ಸಮಿತಿಯು ವಿವಾಹ ನಡೆಸಲು ದಂಪತಿಗಳಿಗೆ ಅನುಮತಿ ನೀಡಿದೆ ಎಂದು ಅವರ ವಕೀಲ ವಿಶ್ರಮ್ ಪ್ರಜಾಪತ್ ತಿಳಿಸಿದ್ದಾರೆ. ಹನುಮಾನ್ ಪ್ರಸಾದ್ ಅವರ ಹುಟ್ಟೂರಾದ ಅಲ್ವಾರ್ ಜಿಲ್ಲೆಯ ಬರೋಡಾಮಿಯೋದಲ್ಲಿ ವಿವಾಹ ನಡೆಯಲಿದೆ. ರಾಜಸ್ಥಾನದ ಕೈದಿಗಳ ಓಪನ್ ಏರ್ ಕ್ಯಾಂಪ್ ನಿಯಮದ ಮೂಲಕ ಮಹಿಳೆ ಮತ್ತು ಪುರುಷರಿಗೆ ಬಯಲು ಶಿಬಿರ ವ್ಯವಸ್ಥೆಯಲ್ಲಿ ವಾಸಿಸುವ ಸೌಲಭ್ಯ ನೀಡಿದೆ. ಈ ಜೈಲಿನಲ್ಲಿ ವಾಸಿಸುವಾಗ ಈ ಇಬ್ಬರು ಕೈದಿಗಳ ನಡುವೆ ನಿಕಟ ಸಂಬಂಧ ಬೆಳೆದಿದೆ.
ಪ್ರಿಯಾ ಸೇಠ್ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ 2023ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನು ಪ್ರಸಾದ್ ವ್ಯಕ್ತಿಯೊಬ್ಬನನ್ನು ಮತ್ತು ಆತನ ಮೂವರು ಮಕ್ಕಳು ಹಾಗೂ ಸೋದರಳಿಯನನ್ನು ಕೊಂದ ಆರೋಪದ ಮೇರೆಗೆ 2023ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಿಯಾ ಸೇಠ್ಗೆ ಪೆರೋಲ್ ನೀಡಿದ ಕ್ರಮವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಆಕೆಯಿಂದ ಹತ್ಯೆಗೆ ಒಳಗಾಗಿದ್ದ ಸಂತ್ರಸ್ತ ಕುಟುಂಬ ತಿಳಿಸಿದೆ.
ಈ ಎಲ್ಲ ಬೆಳವಣಿಗೆ ನಡುವೆ ಇದೀಗ ಈ ಇಬ್ಬರು ಕೈದಿಗಳ ವಿವಾಹ ಎಲ್ಲರ ಗಮನ ಸೆಳೆದಿದೆ. ಜೈಲಿನ ಗೋಡೆಗಳ ನಡುವೆ ಬೆಳೆದ ಈ ಅಸಾಮಾನ್ಯ ಸಂಬಂಧ ಅಚ್ಚರಿಗೂ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಅಧಿಕಾರಿಗಳು ಜೈಲಿನಲ್ಲಿರುವ ಕಾನೂನಿನ ಅನುಸಾರ ನಾವು ಕ್ರಮ ಕೈಗೊಂಡಿದ್ದೇವೆ. ಬಯಲು ಶಿಬಿರ ವ್ಯವಸ್ಥೆಯಡಿ ಆರು ಸದಸ್ಯರ ಸಮಿತಿಯು ಪೆರೋಲ್ ಮತ್ತು ಪುನರ್ವಸತಿಗಾಗಿ ಅರ್ಹತೆಯ ಬಗ್ಗೆ ಮೌಲ್ಯಮಾಪನ ಕೂಡಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post