ಮಂಗಳೂರ, ಫೆ.23: ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿರುವ ಭಾರತೀಯ ಕೋಸ್ಟ್ ಗಾರ್ಡ್ ತನ್ನ 48ನೇ ವರ್ಷದ ಸ್ಥಾಪನಾ ದಿನಾಚರಣೆ ಅಂಗವಾಗಿ ರೈಸಿಂಗ್ ಡೇ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಬಳಿಯ ಅರಬ್ಬೀ ಸಮುದ್ರ ಮಧ್ಯೆ ಕೋಸ್ಟ್ ಗಾರ್ಡ್ ಸಾಮರ್ಥ್ಯ ಎಷ್ಟರ ಮಟ್ಟಿಗಿದೆ, ಶತ್ರುಗಳನ್ನು ಹಿಮ್ಮೆಟ್ಟಿಸಲು ಎಷ್ಟು ಸಮರ್ಥವಾಗಿದೆ ಎಂಬುದನ್ನು ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ ಮೂಲಕ ತೋರಿಸಿಕೊಟ್ಟಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮುಖ್ಯ ಅತಿಥಿಯಾಗಿದ್ದರು. ರೈಸಿಂಗೇ ಡೇ ಆಚರಣೆ ಅಂಗವಾಗಿ ವಿವಿಧ ಕವಾಯತುಗಳನ್ನು ಮತ್ತು ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಎನ್‌ಎಂಪಿಎಯಿಂದ ಸುಮಾರು 15 ನಾಟಿಕಲ್ ಮೈಲು ದೂರದ ಸಮುದ್ರದ ನಡುವೆ ನಡೆದ ಈ ಅಣಕು ಕಾರ್ಯಾಚರಣೆ ಬೆಳಗ್ಗೆ ಸುಮಾರು 11 ರಿಂದ 1.30ರವರೆಗೆ ನಡೆದ ಕೋಸ್ಟ್‌ಗಾರ್ಡ್‌ನ ಈ ವಿವಿಧ ರೀತಿಯ ರಕ್ಷಣಾ ಅಣುಕು ಕಾರ್ಯಾ ಚರಣೆಯಲ್ಲಿ 2 ಇಂಟರ್ ಸೆಪ್ಟರ್, 2 ಡ್ರಾನಿಯರ್ಸ್, ಒಂದು ಅತ್ಯಾಧುನಿಕ ಹೆಲಿಕಾಪ್ಟರ್, 6 ಹಡಗುಗಳು, ಒಂದು ಕಡಲಾಚೆಯ ಗಸ್ತು ಹಡಗು (ಆಫ್‌ಶೋರ್ ಪ್ಯಾಟ್ರಲ್ ವೆಸೆಲ್- ಒಪಿವಿ) 3 ವೇಗದ ಗಸ್ತು ನೌಕೆ (ಫಾಸ್ಟ್ ಪ್ಯಾಟ್ರಲ್ ವೆಸೆಲ್- ಎಫ್‌ಪಿವಿ)ಗಳು ಕೋಸ್ಟ್ ಗಾರ್ಡ್ ಅಧಿಕಾರಿಗಳ ಮಾರ್ಗದರ್ಶನದ ಕಾರ್ಯಾಚರಣೆಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದವು.
ಕಾರ್ಯಾಚರಣೆ ನೋಡಲು ಬಂದವರು ಕಣ್ಣು ಮಿಟುಕಿಸದೆ ಕೋಸ್ಟ್‌ಗಾರ್ಡ್ ಅಧಿಕಾರಿ ಸಿಬ್ಬಂದಿಗಳ ಪರಾಕ್ರಮವನ್ನು ಕಣ್ತುಂಬಿಕೊಂಡರು. ಒಂದಕ್ಕೊಂದು ಅದ್ಬುತ ಎಂಬಂತೆ ಈ ಕಾರ್ಯಚರಣೆ ನಡೆದವು. ನೀರಿಗೆ ಬಿದ್ದ ಸೇನಾನಿಯೊಬ್ಬನನ್ನು ಹೆಲಿಕಾಫ್ಟರ್ ಮೂಲಕ ಮೇಲಕೆತ್ತುವ ಕಾರ್ಯಾಚರಣೆ ಅದ್ಭುತವಾಗಿತ್ತು. ನೀರಿಗೆ ಬಿದ್ದು ಸ್ಮೂಕ್ ಸಿಗ್ನಲ್ ನೀಡುತ್ತಿದ್ದ ವ್ಯಕ್ತಿಯನ್ನು ಸಿಬ್ಬಂದಿ ಸುತ್ತುವರಿದು ರಕ್ಷಿಸಿದ್ರು.
2018ರಿಂದ ಕರಾವಳಿ ಕಡಲಿನಲ್ಲಿ ಕೋಸ್ಟ್‌ಗಾರ್ಡ್‌ನ ಕಡಲಾಚೆಯ ಗಸ್ತು ಹಡಗಾಗಿ ಕಾರ್ಯಾಚರಿಸುತ್ತಿರುವ ‘ವಿಕ್ರಂ’ ನೊಳಗೆ ಬೆಳಗ್ಗೆ 10.30ರ ವೇಳೆಗೆ ಪ್ರವೇಶಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೋಸ್ಟ್‌ಗಾರ್ಡ್ ಗೌರವದೊಂದಿಗೆ ಸ್ವಾಗತಿಸಲಾಯಿತು.
ಕರ್ನಾಟಕ ಕೋಸ್ಟ್ ಗಾರ್ಡ್ ಕಮಾಂಡರ್ ಪ್ರವೀಣ್ ಕುಮಾರ್ ಮಿಶ್ರಾ, ಕಮಾಂಡಿಂಗ್ ಅಫೀಸರ್ ಹಾಗೂ ಡಿಐಜಿ ಅಶೋಕ್ ಕುಮಾರ್ ಭಾಮ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಅಲ್ಲದೆ, ಕೋಸ್ಟ್‌ಗಾರ್ಡ್ ಅಧಿಕಾರಿ- ಸಿಬ್ಬಂದಿ, ಕೆಲ ಪ್ರವಾಸಿಗರು ಸೇರಿದಂತೆ ಸುಮಾರು 200ಕ್ಕೂ ಅಧಿಕ ಮಂದಿಯನ್ನು ಹೊತ್ತ ವಿಕ್ರಂ ಕೋಸ್ಟ್‌ಗಾರ್ಡ್ ಎನ್‌ಎಂಪಿಎಯಿಂದ ಸಮುದ್ರದ ಸುಮಾರು 15 ನಾಟಿಕಲ್ ಮೈಲಿಗೆ ತೆರಳಿದ ಬಳಿಕ ಅಣುಕು ಕಾರ್ಯಾಚರಣೆ ಆರಂಭಗೊಂಡಿತು.
Discover more from Coastal Times Kannada
Subscribe to get the latest posts sent to your email.
Discussion about this post