ಮಂಗಳೂರು, ಫೆ.24: ‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮದೊಂದಿಗೆ 77 ಅರ್ಹ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಎಸ್ ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಸಹಕಾರಿ ರಂಗದಲ್ಲಿ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಪರಿಶ್ರಮ ಛಲದಿಂದ ಮಾಡಿದ ಸಾಧನೆ, ಸಹಕಾರಿ ಬ್ಯಾಂಕ್ ಅನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಅವರಿಗೆ ಸಲ್ಲುತ್ತದೆ. ಇಂತಹ ಸಾಧಕರಿಗೆ ಸನ್ಮಾನ ಮಾಡುವುದರಿಂದ ಭವಿಷ್ಯದಲ್ಲಿ ಈ ರೀತಿಯ ಸಾಧನೆಗೈಯಲು ಯುವಜನರಿಗೆ ಪ್ರೇರಣೆ ಆಗಲಿದೆ. ಅವರ ನೇತೃತ್ವದಲ್ಲಿ ಸಹಕಾರ ರಂಗ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಶುಭ ಹಾರೈಸಿದರು.

ಅಭಿವಂದನಾ ಭಾಷಣ ಮಾಡಿದ ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಹಕಾರಿ ರಂಗದ ಸ್ಥಾನಕ್ಕೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನ್ಯಾಯ ಒದಗಿಸಿ ದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಸಾಕಷ್ಟು ಪ್ರತಿಭಾವಂತರನ್ನು ಬೆಳೆಸಿದ್ದಾರೆ. ಸರ್ವರಿಗೆ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ನೆಹರು ಅವರ ಸಹಕಾರಿ ರಂಗದ ಯೋಜನೆಯಂತೆ ಸಹಕಾರ ರಂಗವನ್ನು ಮುನ್ನಡೆಸಿದ್ದಾರೆ. ಅವರ 45 ವರ್ಷಗಳ ಸಹಕಾರ ರಂಗದ ಸಾಧನೆಯತ್ತ ಕಣ್ಣೋಟ ಹರಿಸಿದಾಗ, ದೇಶದ ಬ್ಯಾಂಕ್ ಕ್ಷೇತ್ರದಲ್ಲಿ ಧ್ರುವ ತಾರೆಯಂತೆ ಕಂಗೊಳಿಸಿದವರು, ಸಹಕಾರಿ ರಂಗದ ಮೂಲಕ ಸಾಮಾಜಿಕ ನ್ಯಾಯಕ್ಕೆ ಕೊಡುಗೆ ನೀಡಿದವರು. ಕರಾವಳಿಯಲ್ಲಿ ಹಲವಾರು ಬ್ಯಾಂಕ್ ಗಳನ್ನು ಸ್ಥಾಪಿಸಿದ ಸಾಧನೆಯಂತೆ ಅಂತಹ ಸಾಧಕ ಮಹಾನುಭಾವರ ಸಾಲಿನಲ್ಲಿ ರಾಜೇಂದ್ರ ಕುಮಾರ್ ನಿಲ್ಲುತ್ತಾರೆ ಎಂದು ಅಭಿಪ್ರಾಯಿಸಿದರು. 64 ಕೋಟಿ ರೂ ಠೇವಣಿಯಿದ್ದ ಎಸ್ ಸಿಡಿಸಿಸಿ ಬ್ಯಾಂಕ್ ಈಗ 7,000 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹ ಮಾಡಲು ಸಾಧ್ಯ ವಾಗಿದೆ. ಬ್ಯಾಂಕ್ 25 ಶಾಖೆಗಳಿಂದ 113 ಶಾಖೆಗಳಿಗೆ ಏರಿಕೆ ಯಾಗಿದೆ. ಸಹಕಾರಿ ರಂಗದ ಬೆಳವಣಿಗೆಗೆ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಅಭಿನಂದನೆ ಸ್ವೀಕರಿಸಿದ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಮಾತನಾಡಿ, ದೇಶದ 459 ಜಿಲ್ಲಾ ಸಹಕಾರಿ ಬ್ಯಾಂಕುಗಳ ಪೈಕಿ ಎಸ್ ಸಿ ಡಿಸಿಸಿ ಬ್ಯಾಂಕ್ ಪ್ರಥಮ ಸ್ಥಾನದಲ್ಲಿ ಇದೆ ಎನ್ನುವ ಬಗ್ಗೆ ನಬಾರ್ಡ್ ನೀಡಿದ ಗೌರವ ತನಗೆ ತೃಪ್ತಿ ನೀಡಿದೆ ಎಂದರು. ದೇಶದ ರಾಷ್ಟ್ರೀಕೃತ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು ವಿಲೀನ ಗೊಳ್ಳುತ್ತಿ ರುವ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆ ಆರಂಭಿಸಿ ಸೇವೆ ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ನೀಡದೆ ಇದ್ದ ಸಾಲದ ಸಹಾಯವನ್ನು ಸಹಕಾರಿ ಬ್ಯಾಂಕುಗಳು ಕ್ಲಪ್ತ ಸಮಯದಲ್ಲಿ ನೀಡಿವೆ. ರಾಜ್ಯದ ಲಕ್ಷಾಂತರ ರೈತರಿಗೆ ಸಹಾಯ ಮಾಡಿದ್ದೇವೆ. ಜಿಲ್ಲಾ ಬ್ಯಾಂಕ್ ಗಳಿಗಿಂತ ಹೆಚ್ಚು ಲಾಭ ಪತ್ತಿನ ಸಹಕಾರಿ ಬ್ಯಾಂಕುಗಳ ಮೂಲಕ ನಡೆಯುತ್ತಿದೆ. 9 ಜಿಲ್ಲೆ ಗಳಲ್ಲಿ ನವೋದಯ ಸ್ವ ಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸಹಕಾರ ,ಸ್ವಾವಲಂಬನೆಗೆ ಸಹಕಾರ ನೀಡಿದೆ ಎಂದರು.
ಶ್ರೀ ಕಟೀಲು ಕ್ಷೇತ್ರದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ನಬಾರ್ಡ್ ಡಿಜಿಎಂ ಜಗದೀಶ್, ದ.ಕ. ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ರಾಜ್ಯ ಸಹಕಾರಿ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜು, ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ್ ರೈ, ಸದಾಶಿವ ಉಳ್ಳಾಲ್, ಮೋನಪ್ಪ ಶೆಟ್ಟಿ ಎಕ್ಕಾರು, ವಾದಿರಾಜ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ನವೋದಯ ಚ್ಯಾರಿ ಟೇಬಲ್ ಟ್ರಸ್ಟ್ ಅಧ್ಯಕ್ಷ ಮೇಘರಾಜ ಜೈನ್, ಆಕಾಶ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುನಿರಾಜು, ಬ್ಯಾಂಕಿನ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post