ನ್ಯೂಯಾರ್ಕ್(ಯುಎಸ್‌ಎ): ಭಾನುವಾರ ರಾತ್ರಿ ಇಲ್ಲಿನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಏರ್ ಕೆನಡಾ ವಿಮಾನ, ಬಂದರು ಪ್ರಾಧಿಕಾರದ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ನ್ಯೂಯಾರ್ಕ್ ಪೊಲೀಸ್ ಇಲಾಖೆ ವಿಮಾನ ಡಿಕ್ಕಿಯಾಗಿರುವ ಬಗ್ಗೆ ದೃಢಪಡಿಸಿದೆ. ಆದರೆ ಈ ಬಗ್ಗೆ ತಕ್ಷಣಕ್ಕೆ ಹೆಚ್ಚುವರಿ ಮಾಹಿತಿಯನ್ನು ನೀಡಿಲ್ಲ. ರಾತ್ರಿ 11.38ಕ್ಕೆ ರನ್ವೇಯಲ್ಲಿ ವಿಮಾನ ವಾಹನಕ್ಕೆ ಡಿಕ್ಕಿ ಹೊಡೆದಿರುವುದಾಗಿ ವರದಿಯಾಗಿದೆ. ತಕ್ಷಣ ಅಗ್ನಿಶಾಮಕ ದಳ ಪ್ರತಿಕ್ರಿಯಿಸಿದೆ ಎಂದು ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆ ವಕ್ತಾರರು ತಿಳಿಸಿದ್ದಾರೆ.
ವಿಮಾನದ ಮುಂಭಾಗಕ್ಕೆ ತೀವ್ರ ಹಾನಿಯಾಗಿರುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಸ್ಥಳದಲ್ಲಿದ್ದವರು ಸೆರೆ ಹಿಡಿದಿರುವ ವಿಡಿಯೋಗಳಲ್ಲಿ ವಿಮಾನವು ತೀವ್ರವಾಗಿ ಹಾನಿಗೊಳಗಾಗಿರುವುದನ್ನು ಗಮನಿಸಬಹುದು. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನ ನ್ಯಾಷನಲ್ ಏರ್‌ಸ್ಪೇಸ್ ಸಿಸ್ಟಮ್ ವೆಬ್‌ಸೈಟ್, ಲಾಗಾರ್ಡಿಯಾ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ವರದಿ ಮಾಡಿದೆ. ಸೋಮವಾರ ಮುಂಜಾನೆ ಲಾಗಾರ್ಡಿಯಾದಿಂದ ಹೊರಡುವ ಎಲ್ಲಾ ವಿಮಾನಗಳು ವಿಳಂಬವಾಗಿವೆ ಅಥವಾ ರದ್ದಾಗಿವೆ ಎಂದು ವಿಮಾನ ನಿಲ್ದಾಣದ ವೆಬ್ಸೈಟ್ನಲ್ಲಿ ಹೇಳಲಾಗಿದೆ.

ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡಿಂಗ್ ಆಗುವಾಗ ವಿಮಾನ ನಿಲ್ದಾಣದ ರಕ್ಷಣಾ ಮತ್ತು ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ವಿಮಾನ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ FlightRadar24 ಹೇಳಿದೆ. ಏರ್ ಕೆನಡಾದ ಪ್ರಾದೇಶಿಕ ಪಾಲುದಾರ ಜಾಝ್ ಏವಿಯೇಷನ್ ನಿರ್ವಹಿಸುವ CRJ-900 ವಿಮಾನ ಮಾಂಟ್ರಿಯಲ್‌ನಿಂದ ಹೊರಟು ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು ಎಂದು ವೆಬ್‌ಸೈಟ್ ಹೇಳಿದೆ.
ಫ್ಲೈಟ್‌ರಾಡರ್ 24 ಪ್ರಕಾರ, ವಿಮಾನ ರನ್ವೇನಲ್ಲಿನ ಸಾಗುತ್ತಿದ್ದ ವೇಳೆ, ವಾಹನ ತನ್ನ ಮಾರ್ಗದಿಂದ ತಪ್ಪಿ ಬಂದಿದೆ. ಆಗ ವಿಮಾನ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಏರ್ ಕೆನಡಾ ವಿಮಾನದ ಮುಂಭಾಗ ಹಾಗೂ ಕಾಕ್‌ಪಿಟ್ ಪ್ರದೇಶ ತೀವ್ರವಾಗಿ ಹಾನಿಗೊಳಗಾಗಿದೆ. ಅಪಘಾತ ಸಂಭವಿಸಿದ ತಕ್ಷಣವೇ ತುರ್ತು ವಾಹನಗಳು ಸ್ಥಳಕ್ಕಾಗಮಿಸಿವೆ. ಕ್ವೀನ್ಸ್ ಪ್ರಾಂತ್ಯದ ಪ್ರಮುಖ ಸಾರಿಗೆ ಕೇಂದ್ರದ ಬಳಿ ರಸ್ತೆ ಮುಚ್ಚಿರುವ ಬಗ್ಗೆ, ಸಂಚಾರ ವಿಳಂಬ ಮತ್ತು ತುರ್ತು ಸಿಬ್ಬಂದಿ ವ್ಯವಸ್ಥೆ ಮಾಡಿರುವುದಾಗಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ನ್ಯೂಯಾರ್ಕ್‌ನ ತುರ್ತು ನಿರ್ವಹಣಾ ಪ್ರಾಧಿಕಾರವು ಜನರಿಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿದೆ.
Discover more from Coastal Times Kannada
Subscribe to get the latest posts sent to your email.







Discussion about this post