ಮಂಗಳೂರು, ಜು 23 : ಕಿಸ್ಸಿಂಗ್ ಮತ್ತು ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಮತ್ತೆ ಮೂವರು ಆರೋಪಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಮೂವರನ್ನು ಬಾಲ ನ್ಯಾಯಮಂಡಳಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ, ಎರಡು ದಿನಗಳ ಹಿಂದೆ ಬಂಧಿಸಿ ಜುವೆನಿಲ್ ಕೋರ್ಟಿಗೆ ಹಾಜರುಪಡಿಸಿ ಹೆತ್ತವರ ವಶಕ್ಕೆ ಬಿಟ್ಟುಕೊಟ್ಟಿದ್ದ ನಾಲ್ಕು ಮಂದಿಯ ಪೈಕಿ ಒಬ್ಬನನ್ನು ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳು ಅಶ್ಲೀಲವಾಗಿ ವರ್ತಿಸಿದ್ದಲ್ಲದೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದು, 3 ಪೋಕ್ಸೊ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 8 ಮಂದಿಯನ್ನು ವಶಕ್ಕೆ ಪಡೆದಂತಾಗಿದೆ. ಪ್ರಕರಣ ಮಹಿಳಾ ಠಾಣೆಯಿಂದ ನಗರ ಅಪರಾಧ ಪತ್ತೆದಳ(ಸಿಸಿಬಿ)ಕ್ಕೆ ವರ್ಗಾವಣೆಯಾಗಿದ್ದು, ನಾನಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post