ಮಾಸ್ಕೋ: ಸುಮಾರು 49 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ತಾಂತ್ರಿಕ ದೋಷದಿಂದ ಗುರುವಾರ ರಷ್ಯಾದ ಪೂರ್ವ ಪ್ರದೇಶ ಅಮುರ್ ಎಂಬ ಸ್ಥಳದಲ್ಲಿ ಪತನಗೊಂಡಿದೆ. ಬದುಕುಳಿದವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ AN-24 ಸಂಖ್ಯೆಯ ವಿಮಾನ ಇದಾಗಿದ್ದು, ರಷ್ಯಾ-ಚೀನಾದ ಗಡಿ ಪ್ರದೇಶವಾದ ಬ್ಲಾಗೊವೆಶ್‌ಚೆನ್ಸ್ಕ್ ನಗರದಿಂದ ಟಿಂಡಾ ಪಟ್ಟಣಕ್ಕೆ ತೆರಳುತ್ತಿತ್ತು. ಈ ವೇಳೆ ಸ್ಥಳೀಯ ಕಾಲಮಾನ ಮಧ್ಯಾಹ್ನ 1:00 ಗಂಟೆಗೆ (0400 GMT) ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿರುವುದು ತಿಳಿದುಬಂದಿದೆ.
ಸುದ್ದಿ ತಿಳಿದು ರಕ್ಷಣಾ ಹೆಲಿಕಾಪ್ಟರ್ ತೆರಳಿದ್ದು, ಟಿಂಡಾದಿಂದ 15 ಕಿಲೋಮೀಟರ್ ದೂರದಲ್ಲಿರುವ ಇಳಿಜಾರು ಪ್ರದೇಶದಲ್ಲಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿದೆ. ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ವಿಮಾನದಲ್ಲಿ ಐರು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ಮತ್ತು ಆರು ಜನ ಸಿಬ್ಬಂದಿ ಇದ್ದರು ಎಂದು ಪ್ರದೇಶದ ಗವರ್ನರ್ ವಾಸಿಲಿ ಓರ್ಲೋವ್ ಮಾಹಿತಿ ನೀಡಿದ್ದಾರೆ.
ರಷ್ಯಾದ ತನಿಖಾಧಿಕಾರಿಗಳು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ದಟ್ಟ ಹಾಗೂ ಇಳಿಜಾರಿನಿಂದ ಕೂಡಿರುವ ಅರಣ್ಯ ಪ್ರದೇಶದಲ್ಲಿ ವಿಮಾನದ ಅವಶೇಷಗಳಿಂದ ಹೊಗೆ ಬರುತ್ತಿರುವುದು ಅದರಲ್ಲಿ ಸೆರೆಯಾಗಿದೆ.
25 ಜನರು ಮತ್ತು ಐದು ಯುನಿಟ್ ಉಪಕರಣಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸಿಬ್ಬಂದಿಗಳೊಂದಿಗೆ ನಾಲ್ಕು ವಿಮಾನಗಳು ಅಲ್ಲಿಗೆ ತೆರಳಲು ಸಿದ್ಧವಾಗಿವೆ. ಅರಣ್ಯ ಪ್ರದೇಶವಾಗಿದ್ದರಿಂದ ಸ್ಥಳಕ್ಕೆ ಹೋಗುವುದು ಕಷ್ಟಕರವಾಗಿದೆ. ಆದರೂ, ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಲಿವೆ. ಬದುಕುಳಿದವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿಯೊಬ್ಬರು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರಷ್ಯಾದ ಇರ್ಕುಟ್ಸ್ಕ್ ನಗರದಲ್ಲಿರುವ ಅಂಗಾರ ಏರ್ಲೈನ್ಸ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾದ ಫಾರ್ ಈಸ್ಟರ್ನ್ ಟ್ರಾನ್ಸ್‌ಪೋರ್ಟ್ ಪ್ರಾಸಿಕ್ಯೂಟರ್ ಕಚೇರಿ ಈ ಬಗ್ಗೆ ಖಚಿತಪಡಿಸಿದೆ. ಟಿಂಡಾ ಪಟ್ಟಣಕ್ಕೆ ತೆರಳುತ್ತಿದ್ದಾಗ ವಿಮಾನ ಅಪಘಾತಕ್ಕೀಡಾಗಿದೆ. ಅದಕ್ಕೂ ಮುನ್ನ ವಿಮಾನವು ಎರಡನೇ ಲ್ಯಾಂಡಿಂಗ್‌ಗೆ ತೆರಳಿತು. ನಂತರ ಸಂಪರ್ಕ ಕಡಿತಗೊಂಡಿತು. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಕಚೇರಿ ತಿಳಿಸಿದೆ.
ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತಿಳಿದು ಬಂದಿಲ್ಲ. ಈ ವಿಮಾನವನ್ನು ಸುಮಾರು 50 ವರ್ಷಗಳ ಹಿಂದೆ ತಯಾರಿಸಲಾಗಿತ್ತು. 2021 ರಲ್ಲಿ, ವಿಮಾನದ ವಾಯು ಯೋಗ್ಯತಾ ಪ್ರಮಾಣಪತ್ರವನ್ನು 2036ರ ವರೆಗೆ ವಿಸ್ತರಿಸಲಾಗಿತ್ತು ಎಂದು ರಾಜ್ಯ TASS ಸುದ್ದಿ ಸಂಸ್ಥೆ ವರದಿ ಮಾಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post