ಬೆಳ್ತಂಗಡಿ: ಬೆಳಾಲು ಗ್ರಾಮದ ಎಸ್.ಪಿ.ಬಿ. ಕೌಂಪೌಂಡ್ ನಿವಾಸಿ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಎಸ್.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಶನಿವಾರ(ಆ.24ರಂದು) ಬಂಧಿಸಲಾಗಿದೆ.
ಮಂಗಳವಾರ(ಆ.20ರಂದು) ಬೆಳಾಲು ಗ್ರಾಮದ ಎಸ್.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರು ಮನೆಯಲ್ಲಿದ್ದಾಗ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿ ಆಗಿದ್ದರು. ಮನೆ ಅಂಗಳದಲ್ಲಿಯೇ ವ್ಯಕ್ತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ, ಸ್ಥಳದಿಂದ ಪರಾರಿ ಆಗಿದ್ದರು. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಬಾಲಕೃಷ್ಣ ಅವರ ಕಿರಿಯ ಪುತ್ರ ಸುರೇಶ್ ಭಟ್ ಆ. 20ರಂದು ರಾತ್ರಿ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಿಸಿದ್ದರು.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದ್ದು, ಮೃತ ಬಾಲಕೃಷ್ಣ ಭಟ್ ಅವರ ಮಗಳ ಗಂಡ ಹಾಗೂ ಮೊಮ್ಮಗ (ಮಗಳ ಮಗ) ಸೇರಿ ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಸಿ.ಸಿ ಕ್ಯಾಮೆರಾಗಳು, ಮೊಬೈಲ್ ಲೊಕೇಶನ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಮೂರು ದಿನಗಳಲ್ಲಿ ಪತ್ತೆಹಚ್ಚಿದ್ದಾರೆ. ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಆಸ್ತಿ ಕೊಡದ ಕಾರಣಕ್ಕೆ ಕೊಲೆ : ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕಿಲ್ಲಾಯ ಅವರ ಮೃತಪಟ್ಟ ಪತ್ನಿಯ ಚಿನ್ನಾಭರಣಗಳನ್ನು ಮಗಳಾದ ವಿಜಯಲಕ್ಷ್ಮಿ ಅವರಿಗೆ ನೀಡದೆ ಲಾಕರ್ ನಲ್ಲಿ ಇರಿಸಿದ್ದರು. ಜಾಗದಲ್ಲಿಯೂ ಪಾಲು ನೀಡಿರಲಿಲ್ಲ ಎನ್ನಲಾಗಿದೆ. ತಾನು ಬದುಕಿರುವವರೆಗೂ ಜಾಗ ಪಾಲು ಮಾಡುವುದಿಲ್ಲ ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಅಪ್ಪ ಮಗ ಸೇರಿ ಸಂಚು ರೂಪಿಸಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ. ಕಾಸರಗೋಡಿನಿಂದ ಮಾರಕಾಸ್ತ್ರದೊಂದಿಗೆ ಸ್ಕೂಟರಿನಲ್ಲಿ ಬಂದ ಅಪ್ಪ, ಮಗ ಬೆಳಾಲಿನ ಮನೆಗೆ ಬಂದು ಊಟ ಮಾಡಿ ದ್ದಾರೆ. ಊಟದ ಬಳಿಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಮೇಲೆ ಮನೆಯೊಳಗೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹಲ್ಲೆಯ ವೇಳೆ ಮನೆಯಿಂದ ಹೊರಗೆ ಓಡಿದ ಅವರನ್ನು ಬೆನ್ನಟ್ಟಿದ ಆರೋಪಿಗಳು ಅಂಗಳದಲ್ಲಿ ಕುಸಿದು ಬಿದ್ದ ಬಾಲಕೃಷ್ಣರ ಮೇಲೆ ಮತ್ತೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದು, ಬಳಕ ಆರೋಪಿಗಳು ಸ್ಕೂಟರ್ ನಲ್ಲಿಯೇ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಡಿ.ವೈ.ಎಸ್.ಪಿ ವಿಜಯ ಪ್ರಸಾದ್ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post