ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಹಾತೋಬಾರ ಶ್ರೀ ಕ್ಷೇತ್ರ ಕಾರಿಂಜದ ವಠಾರದಲ್ಲಿ ನಡೆದ ರುದ್ರಗಿರಿಯ ರಣಕಹಳೆ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನವೆಸಗಿರುವ ಪ್ರಕರಣ ಸಂಬಂಧ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ ಕಾರಂತ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 21ರಂದು ಮಂಗಳೂರು ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದ ಕಾರಿಂಜದಲ್ಲಿ ನಡೆದ ರುದ್ರಗಿರಿಯ ರಣಕಹಳೆ ಕಾರ್ಯಕ್ರಮದಲ್ಲಿ ಹಿಂದು ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಜಿಲ್ಲಾಧಿಕಾರಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿಗೆ 30 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ತಪ್ಪಿದ್ದಲ್ಲಿ ಡಿ. 21ರಂದು ಸಾವಿರಾರು ಜನರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಜಿಲ್ಲಾಧಿಕಾರಿಯ ಕೊರಳಪಟ್ಟಿಯನ್ನೇ ಹಿಡಿಯುತ್ತೇವೆ. ತಾಕತ್ತಿದ್ದರೆ ಗಣಿಗಾರಿಕೆ ನಿಲ್ಲಿಸು. ಇಲ್ಲದಿದ್ದರೆ ವರ್ಗಾವಣೆ ತೆಗೆದುಕೊಂಡು ಹೊರಗೆ ಹೋಗು ಎಂದು ಆರೋಪಿಸಿದ ವಿಚಾರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜಗದೀಶ ಕಾರಂತ ವಿರುದ್ಧ ಇದೀಗ ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. ಶ್ರೀ ಕ್ಷೇತ್ರ ಕಾರಿಂಜದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ್ದ ಜಗದೀಶ್ ಕಾರಂತ, ಅಕ್ರಮ ಗಣಿಗಾರಿಕೆಯನ್ನು 24 ಗಂಟೆಯೊಳಗೆ ನಿಲ್ಲಿಸುವ ಅಧಿಕಾರ ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಇದೆ. ಗಣಿಗಾರಿಕೆ ನಿಲ್ಲಿಸಲು ಅಸಾಧ್ಯವಾದರೆ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಯವರಿಗೆ ತಾಕೀತು ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಲಂ: 153,117, 504, 506, 189 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಕಾರೀಂಜೇಶ್ವರ ದೇವಸ್ಥಾನದ ಸುತ್ತಮುತ್ತ ನಡೆಯುವ ಗಣಿಗಾರಿಕೆಯನ್ನು ನಿಲ್ಲಿಸಲು ಡಿಸೆಂಬರ್ 21 ರವರೆಗೆ ಗಡುವು ಕೊಟ್ಟಿದ್ದೇವೆ, ಇಲ್ಲದಿದ್ದರೆ ಡಿಸೆಂಬರ್ 21 ಕ್ಕೆ ಎಲ್ಲರೂ ಸಿದ್ದರಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಜಿಲ್ಲಾಧಿಕಾರಿಗಳ ಕಛೇರಿಗೆ ಲಗ್ಗೆ ಹಾಕಿ, ಅವನ ಕೊರಳು ಪಟ್ಟಿಯನ್ನು ಹಿಡಿಯುತ್ತೀವೆ. ತಾಕತ್ತಿದ್ದರೆ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸೋ. ಇಲ್ಲವಾದರೇ ಟ್ರಾನ್ಸ್ ಫರ್ ತೆಗೆದುಕೊಂಡು ಹೋಗೋ..ಎಂಬಿತ್ಯಾದಿ ರೀತಿಯಲ್ಲಿ ಏಕವಚನ ಮತ್ತು ಅಸಭ್ಯವಾಗಿ ಮಾತುಗಳನ್ನಾಡುವ ಮೂಲಕ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ತೋರಿಸಿರುವುದಲ್ಲದೇ, ಸರಕಾರಿ ಅಧಿಕಾರಿಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಪ್ರಚೋದನೆಯನ್ನು ಹಾಗೂ ಅಪರಾಧಕ್ಕೆ ದುಷ್ಪ್ರೇರಣೆ ನೀಡಿರುತ್ತಾರೆ. ಸರಕಾರಿ ಅಧಿಕಾರಿಗೆ ಹಾನಿ ಮತ್ತು ಹಲ್ಲೆ ಮಾಡಲು ಪ್ರಚೋದಿಸಿ ಬೆದರಿಕೆ ಹಾಕಿದ್ದಾಗಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ದೂರಿನಲ್ಲಿ ತಿಳಿಸಿದ್ದಾರೆ.