ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ವ್ಯಾಪರಿಕ ಸಂಸ್ಥೆಗಳು , ಅಂಗಡಿಗಳು, ಹೋಟೆಲ್, ರೆಸ್ಟೊರೆಂಟ್ , ಟೀ ಸ್ಟಾಲ್‌ಗಳು, ಪಾನ್ ಅಂಗಡಿಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು ಪ್ರತಿದಿನ ರಾತ್ರಿ 11:45 ರಿಂದ ಮಾರನೇ ದಿನ ಬೆಳಗ್ಗೆ 5: 30ರ ವರೆಗೆ ಮಾತ್ರ ವ್ಯಾಪಾರ ವಹಿವಾಟು ನಿರ್ಬಂಧ ವಿಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ಸೋಮವಾರ ಆದೇಶ ನೀಡಿದ್ದಾರೆ.
ಈ ಆದೇಶ ಸಿಎಲ್-4, ಸಿಎಲ್-6(ಎ), ಸಿಎಲ್-7 ಲೈಸೆನ್ಸ್ ಹೊಂದಿದವರಿಗೆ ಅನ್ವಯಿಸುವುದಿಲ್ಲ ಅವರು ಲೈಸೆನ್ಸ್‌ನಲ್ಲಿ ನಿಗದಿಪಡಿಸಲಾದ ನಿಯಮವನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವೆಗಳು, ಅಗತ್ಯ ಸಾರ್ವಜನಿಕ ಉಪಯೋಗದ ಸೇವೆಗಳು ಹಾಗೂ ಸರಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಿಶೇಷ ಅನುಮತಿ ನಡೆದ ಸಂಸ್ಥೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ಹಿಂದೆ ಮಂಗಳೂರಿನಲ್ಲಿ ಕೋಮು ಹಿಂಸೆ ಹೆಚ್ಚಿದ್ದರಿಂದ ರಾತ್ರಿಯ ವಹಿವಾಟನ್ನು 10.30ಕ್ಕೆ ಮಿತಿಗೊಳಿಸಿ ಆದೇಶ ಮಾಡಲಾಗಿತ್ತು. ಮಂಗಳೂರಿಗೆ ಕಮಿಷನರ್ ಸುಧೀರ್ ರೆಡ್ಡಿ ಬಂದ ಬಳಿಕ ಕಳೆದೊಂದು ವರ್ಷದಲ್ಲಿ ವಾತಾವರಣ ಬದಲಾಗಿದ್ದು ಕೋಮು ದ್ವೇಷಕ್ಕೆ ನಿಯಂತ್ರಣ ಬಿದ್ದಿದೆ. ದ್ವೇಷದ ಪೋಸ್ಟ್ ಮಾಡುತ್ತಿದ್ದವರು ಸೈಲಂಟ್ ಆಗಿದ್ದಾರೆ. ಸಿಎಂ ಡಿಕೆಶಿ ಹೇಳಿದಂತೆ ರಾತ್ರಿಯ ವಹಿವಾಟು ತೆರೆದುಕೊಳ್ಳಲು ಮಂಗಳೂರು ನಗರ ತೆರೆದುಕೊಂಡಿದೆ. ಇದರ ಮೊದಲ ಹೆಜ್ಜೆ ಎನ್ನುವಂತೆ, ರಾತ್ರಿ ವಹಿವಾಟನ್ನು ಒಂದು ಕಾಲು ಗಂಟೆ ಹೆಚ್ಚುವರಿಯಾಗಿ ವಿಸ್ತರಿಸಲಾಗಿದೆ.
ರಾತ್ರಿ ವೇಳೆಯಲ್ಲಿ ವ್ಯಾಪಾರ ಕೇಂದ್ರಗಳ ಬಳಿ ವಾಹನಗಳ ನಿಲುಗಡೆ, ಜೋರಾದ ಶಬ್ದ ಗದ್ದಲ, ರಸ್ತೆಗಳಲ್ಲಿ ಅನಗತ್ಯ ಜನರ ಗುಂಪುಗೂಡುವಿಕೆ ಮುಂತಾದವುಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ವಿಶೇಷವಾಗಿ ಆಸ್ಪತ್ರೆ ರೋಗಿಗಳಿಗೆ, ವಸತಿ ಪ್ರದೇಶಗಳಲ್ಲಿರುವ ಸಾರ್ವಜನಿಕರ ನೆಮ್ಮದಿ ಮತ್ತು ಶಾಂತಿಗೆ ಭಂಗ ಉಂಟಾ ಗುತ್ತದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ವ್ಯಾಪಾರ ವಹಿವಾಟಿನ ಮೇಲಿನ ನಿರ್ಬಂಧವನ್ನು ರಾತ್ರಿ 11:45 ಗಂಟೆಯಿಂದ ಮಾರನೇ ದಿನ ಬೆಳಗ್ಗೆ 5:30 ಗಂಟೆಯವರೆಗೆ ಸಮಯವನ್ನು ನಿಗದಿಪಡಿಸುವುದು ಅವಶ್ಯವೆಂದು ಮನಗಂಡು ಈ ಆದೇಶ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.






Discussion about this post