ಮಂಗಳೂರು: ಕೆಲಸ ಮಾಡಿದ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನನ್ನು ಪೇಪರ್ ಕಟ್ಟರ್ ಬ್ಲೇಡ್ ಹಾಗೂ ವ್ಯಾಯಾಮದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಅಪರಾಧಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಟ್ಟು 32,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಪ್ರಕರಣದ 1ನೇ ಆರೋಪಿ ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 2ನೇ ಆರೋಪಿ ಸಿದ್ದು ಯಾನೆ ಸಿದ್ದಪ್ಪ ನಿರ್ದೋಷಿ ಎಂದು ಬಿಡುಗಡೆಗೊಳಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: 2020ರ ನವೆಂಬರ್ 3ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್‌ನಲ್ಲಿರುವ ಸುರೇಂದ್ರನ್ ಎಂಬವರ ಮನೆಯಲ್ಲಿ ಈ ಕೊಲೆ ನಡೆದಿತ್ತು. ಸುರೇಂದ್ರನ್ ಅವರು ಕೆಲಸ ಮಾಡಿದ ಹಣ ನೀಡಿಲ್ಲ ಎಂಬ ಕಾರಣಕ್ಕೆ 1ನೇ ಆರೋಪಿ ಸಂತೋಷ್, 2ನೇ ಆರೋಪಿ ಸಿದ್ದಪ್ಪನ ಜೊತೆಗೂಡಿ ಹಣ ಕೇಳಲು ಸುರೇಂದ್ರನ್ ಮನೆಗೆ ತೆರಳಿದ್ದ. ಸಿದ್ದಪ್ಪನ ಪ್ರೇರೇಪಣೆಯಿಂದ ಮನೆಯೊಳಗೆ ಹೋಗಿ ಹಣ ಕೇಳಿದ ವಿಚಾರದಲ್ಲಿ ಸುರೇಂದ್ರನ್ ಮತ್ತು ಸಂತೋಷ್ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಆಕ್ರೋಶಗೊಂಡ ಸಂತೋಷ್, ಪೇಪರ್ ಕಟ್ ಮಾಡುವ ಬ್ಲೇಡ್‌ನಿಂದ ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಕೊಯ್ದಿದ್ದಲ್ಲದೆ, ವ್ಯಾಯಾಮ ಮಾಡುವ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2020, ಐಪಿಸಿ ಕಲಂ 302, 392, 201, 114 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಕಾವೂರು ಪೊಲೀಸ್ ನಿರೀಕ್ಷಕರಾಗಿದ್ದ ರಾಘವ್ ಪಡೀಲ್ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಕರಣದ (SC ನಂಬರ್: 77/2022) ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಸಂತು ಯಾನೆ ಸಂತೋಷ್ ದೋಷಿ ಎಂದು ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ (ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 1 ವರ್ಷ ಸಾದಾ ಶಿಕ್ಷೆ), 2 ವರ್ಷಗಳ ಕಾರಾಗೃಹವಾಸ ಮತ್ತು 5,000 ರೂ. ದಂಡ (ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 1 ತಿಂಗಳ ಶಿಕ್ಷೆ), 6 ತಿಂಗಳ ಕಾರಾವಾಸ ಮತ್ತು 2,000 ರೂ. ದಂಡ (ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 15 ದಿನಗಳ ಶಿಕ್ಷೆ) ತೀರ್ಪು ನೀಡಿದ್ದಾರೆ.
ಅಪರಾಧಿಗೆ ವಿಧಿಸಲಾದ ಒಟ್ಟು 32,000 ರೂ. ದಂಡದ ಮೊತ್ತದಲ್ಲಿ 25,000 ರೂ. ಹಣವನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ಪರಿಹಾರವಾಗಿ ನೀಡಬೇಕು ಮತ್ತು ಉಳಿದ 7,000 ರೂ. ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು.
Discover more from Coastal Times Kannada
Subscribe to get the latest posts sent to your email.





Discussion about this post