ಕಾರ್ಕಳ, ಜ 25 : ಹೊಸದಾಗಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕರ್ನಾಟಕ ಜರ್ಮನ್ ಟೆಕ್ನಾಲಜಿ ತರಬೇತಿ ಸಂಸ್ಥೆ (ಕೆಜಿಟಿಟಿಐ)ಗಳ ಮಂಜೂರಾತಿಯಿಂದಾಗಿ ತಾಂತ್ರಿಕ ಶಿಕ್ಷಣದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಇದೀಗ ಈ ನರ್ಸಿಂಗ್ ಕಾಲೇಜಿನ ಮಂಜೂರಾತಿಯಿಂದಾಗಿ ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೂ ಕೂಡ ಪ್ರಯೋಜನವಾಗಲಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳು ಮಲೆನಾಡಿನ ತಪ್ಪಲಿನ ಪ್ರದೇಶಗಳನ್ನು ಹೊಂದಿದ್ದು ಹೆಚ್ಚಿನ ಪ್ರದೇಶಗಳು ತಾಲೂಕು ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಕಾರ್ಕಳದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನರ್ಸಿಂಗ್, ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸುಗಳನ್ನು ವ್ಯಾಸಂಗ ಮಾಡಬೇಕಾದರೆ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಬಿ.ಎಸ್ಸಿ ನರ್ಸಿಂಗ್ ಮಾಡಬೇಕಾದರೆ ಮಂಗಳೂರು ವೆನ್ಲಾಕ್ ಇಲ್ಲವೇ ಅಧಿಕ ಪ್ರವೇಶ ಶುಲ್ಕ ಪಾವತಿಸಿ ಖಾಸಗಿ ನರ್ಸಿಂಗ್ ಕಾಲೇಜುಗಳನ್ನು ಆಶ್ರಯಿಸಬೇಕಾಗಿತ್ತು.
ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಕಳ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಎಸ್ಸಿ ನರ್ಸಿಂಗ್ ಕಾಲೇಜು ಆರಂಭಿಸುವರೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದೀಗ ಮಾನ್ಯ ಸಚಿವರ ವಿಶೇಷ ಮುತುವರ್ಜಿಯಿಂದ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಎಸ್ಸಿ ನರ್ಸಿಂಗ್ ಕೋರ್ಸನ್ನು 2021-22ನೇ ಸಾಲಿನಲ್ಲಿ ಹೊಸದಾಗಿ ಆರಂಭಿಸಲು ಸರ್ಕಾರದಿಂದ ಆದೇಶ ಮಾಡಲಾಗಿದೆ. ಸದ್ರಿ ಬಿ.ಎಸ್ಸಿ ನರ್ಸಿಂಗ್ ಕಾಲೇಜು 40 ಸೀಟು ಪ್ರವೇಶ ಮಿತಿಯೊಂದಿಗೆ ಆರಂಭಗೊಳ್ಳಲಿದ್ದು ಈ ವರ್ಷವೇ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿದೆ. ಇದಕ್ಕೆ ಸಂಬಂಧಿಸಿದ ನೀತಿ ನಿಯಮಗಳನ್ನು ತಕ್ಷಣವೇ ಪೂರೈಸಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post