ಮಂಗಳೂರು: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಕೆ.ಸಿ.ರೋಡ್ ಶಾಖೆಯಲ್ಲಿ ಕಳೆದ ಶುಕ್ರವಾರ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಂದು ಮತ್ತೊಬ್ಬ ಆರೋಪಿಯನ್ನು ತಮಿಳುನಾಡಿನ ತಿರುವನ್ವೇಲಿಯಲ್ಲಿ ಇಂದು ಬಂಧಿಸಿದ್ದಾರೆ. ಬಂಧಿತನನ್ನು ಷಣ್ಮುಗ ಸುಂದರಂ (65) ಎಂದು ಗುರುತಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
ಪ್ರಕರಣ ಸಂಬಂಧಿಸಿ ಇತರೇ ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದಾರೆ. ಮೂವರ ಬಂಧನ ಬಳಿಕ ದರೋಡೆಗೈದ ಚಿನ್ನಾಭರಣದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಈ ನಡುವೆ, ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಮುರುಗಂಡಿ ದೇವರ್ ಮನೆಯಲ್ಲಿ ಶೋಧ ನಡೆಸಿದ್ದು 16.250 ಕೆ.ಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಷಣ್ಮುಗಂ ಈಗಾಗಲೇ ಬಂಧಿತನಾಗಿರುವ ಮುರುಗಂಡಿ ದೇವರ್ ತಂದೆಯಾಗಿದ್ದು ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನವನ್ನು ಪೊಲೀಸರು ವಶಪಡಿಸಿರುವುದಾಗಿ ತಿಳಿದುಬಂದಿದೆ. ಷಣ್ಮುಗಂ ಸುಂದರಮ್ ದರೋಡೆ ಪ್ರಕರಣದಲ್ಲಿ ನೇರವಾಗಿ ಭಾಗವಹಿಸದೆ ಆರೋಪಿಗಳಿಗೆ ಸಹಕರಿಸಿರುವುದಾಗಿ ಹೇಳಲಾಗಿದೆ.
ಆರು ತಿಂಗಳ ಯೋಜನೆ : ಈ ದರೋಡೆ ನಡೆದಿರುವುದು ಕೆಲವು ದಿನಗಳ ತಾಲೀಮಿನಿಂದಲ್ಲ, ಬದಲಾಗಿ ಸುಮಾರು ಆರು ತಿಂಗಳ ಪೂರ್ವ ಯೋಜನೆಯಿಂದ. ಮುರುಗಂಡಿ ಥೇವರ್ ಸೇರಿದಂತೆ ದರೋಡೆಗೆ ಸ್ಕೆಚ್ ಹಾಕಿದ್ದ ತಂಡ ಮಂಗಳೂರಿಗೆ ಆಗಮಿಸಿ ವಾಹನದಲ್ಲಿ ಸೂತ್ರಧಾರನೊಂದಿಗೆ ಈ ಶಾಖೆಯ ಸುತ್ತಮುತ್ತಲಿನ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿತ್ತು ಎನ್ನಲಾಗಿದೆ.
ಬಳಿಕವೂ ಮತ್ತೊಮ್ಮೆ ಈ ಪ್ರದೇಶಕ್ಕೆ ಆಗಮಿಸಿ ಇನ್ನಷ್ಟು ಮಾಹಿತಿಯನ್ನು ಕಲೆಹಾಕಿಕೊಂಡು ಮುಂಬಯಿಯಲ್ಲಿ ಯೋಜನೆ ರೂಪಿಸಿದ್ದರು ಎನ್ನುತ್ತವೆ ಮೂಲಗಳು. ಈ ಸಂದರ್ಭದಲ್ಲಿ ಈ ವ್ಯಾಪ್ತಿಯ ತಮಿಳು ಕೂಲಿ ಕಾರ್ಮಿಕರು ಅಥವಾ ಸ್ಥಳೀಯರು ಮಾಹಿತಿ ನೀಡಿರಬಹುದು ಎಂಬ ಹಿನ್ನೆಲೆಯಲ್ಲಿ ಕೆ.ಸಿ. ರೋಡ್ ಸುತ್ತಮುತ್ತಲಿನ ಪ್ರದೇಶದಲ್ಲಿನ ಹೊರ ರಾಜ್ಯಗಳ ವಲಸೆ ಕಾರ್ಮಿಕರಿಂದಲೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅದರೊಂದಿಗೆ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುವವರ ಮೇಲೂ ನಿಗಾ ಇಡಲಾಗಿದೆ. ಹಾಗಾಗಿ ಪೊಲೀಸರು ಸ್ಥಳೀಯ ವ್ಯಕ್ತಿಯೊಬ್ಬನ ಚಲನವಲನದ ಮೇಲೂ ನಿಗಾ ಇರಿಸಿದ್ದಾರೆ. ಬಂಧಿತರ ಹೇಳಿಕೆ ಆಧರಿಸಿ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಆರೋಪಿಗಳ ಸ್ಥಳ ಮಹಜರು : ಇಬ್ಬರನ್ನು ಉಳ್ಳಾಲ ಪೊಲೀಸರು ಶುಕ್ರವಾರ ಮಧ್ಯಾಹ್ನ ದರೋಡೆ ನಡೆದಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ ರೋಡ್ ಶಾಖೆ ಮತ್ತು ದರೋಡೆಗೆ ಸ್ಕೆಚ್ ಹಾಕಲಾಗಿದ್ದ ಅಲಂಕಾರ ಗುಡ್ಡೆಯ ಖಾಸಗಿ ಪ್ರದೇಶಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ. ಕಳೆದ ಶುಕ್ರವಾರ ಆರೋಪಿಗಳು ಕೆ.ಸಿ ರೋಡಿನ ಬ್ಯಾಂಕನ್ನ ದರೋಡೆ ಮಾಡಿದ್ದರು. ಕೆ.ಸಿ ರೋಡ್ ಜಂಕ್ಷನಲ್ಲಿ ಬಹುತೇಕ ಮುಸ್ಲಿಮರ ಅಂಗಡಿ, ಮುಂಗಟ್ಟುಗಳೇ ಹೆಚ್ಚಿದ್ದು, ಶುಕ್ರವಾರ ಮಧ್ಯಾಹ್ನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವ್ಯಾಪಾರಿಗಳು ಮಸೀದಿಗೆ ತೆರಳುತ್ತಾರೆ. ಇದೇ ಸಮಯ ಸಂದರ್ಭವನ್ನೇ ಬಳಸಿದ ಆರೋಪಿಗಳು ಬ್ಯಾಂಕನ್ನ ದರೋಡೆಗೈದಿದ್ದರು.
ಆರೋಪಿಗಳನ್ನ ಸ್ಥಳ ಮಹಜರಿಗೆ ಕರೆತರುವ ವೇಳೆ ಸ್ಥಳೀಯರು ದಾಳಿ ನಡೆಸಬಾರದೆನ್ನುವ ಮುಂಜಾಗ್ರತೆಯಿಂದ ಪೊಲೀಸರು ಬಂಧಿತರನ್ನ ಶುಕ್ರವಾರ ಮಧ್ಯಾಹ್ನವೇ ದರೋಡೆ ನಡೆದ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಗಳಿಗೆ ಫೆ.3ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post