ಬೆಳಗಾವಿ ಜ. 25: ಗೋವಾದಿಂದ ಮಹಾರಾಷ್ಟ್ರಕ್ಕೆ ರೂ.400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನೇ ಹೈಜಾಕ್ ಮಾಡಿರುವ ದೇಶದ ಅತಿ ದೊಡ್ಡ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದೇಶದ ಅಪರಾಧದ ಇತಿಹಾಸದಲ್ಲೇ ಬೆಚ್ಚಿ ಬೀಳಿಸುವ ಅತಿದೊಡ್ಡದಾದ ದರೋಡೆ ಪ್ರಕರಣ ಇದಾಗಿದೆ ಎಂದೇ ಹೇಳಲಾಗುತ್ತಿದೆ.
ಸುಮಾರು ರೂ.400 ಕೋಟಿ ನಗದು ತುಂಬಿದ್ದ ಎರಡು ಕಂಟೇನರ್‌ಗಳು: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ಈ ಮೂರು ರಾಜ್ಯಗಳ ಪೊಲೀಸ್ ವ್ಯವಸ್ಥೆಯನ್ನೇ ಈ ಘಟನೆ ಅಲರ್ಟ್ ಮಾಡಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು ರೂ.400 ಕೋಟಿ ನಗದು ತುಂಬಿದ್ದ ಎರಡು ಕಂಟೇನರ್‌ಗಳು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಹೈಜಾಕ್ ಆಗಿರುವುದು ಇದೀಗ ಬಹಿರಂಗವಾಗಿದೆ. 2025ರ ಅಕ್ಟೋಬರ್ 16ರಂದು ಈ ದರೋಡೆ ನಡೆದಿದೆ. ಘಟನೆ ನಡೆದು ಹಲವಾರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿರುವುದು ಮೂರು ರಾಜ್ಯಗಳ ಪೊಲೀಸರಲ್ಲಿ ತೀವ್ರ ಅಚ್ಚರಿಯನ್ನುಂಟು ಮಾಡಿದೆ. ಜತೆಗೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಈ ಭಾರೀ ಮೊತ್ತದ ಹಣವು ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ್ದು ಎಂಬ ಮಾಹಿತಿ ಮಹಾರಾಷ್ಟ್ರದ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ ಎರಡು ಕಂಟೇನರ್‌ಗಳು, ಖಾನಾಪುರ ತಾಲೂಕಿನ ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಏಕಾಏಕಿ ನಾಪತ್ತೆಯಾಗಿವೆ. ಈ ಕಂಟೇನರ್‌ಗಳಲ್ಲಿ ರೂ.400 ಕೋಟಿಗೂ ಅಧಿಕ ನಗದು ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಇದೀಗ ಅಧಿಕೃತ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ಕಂಟೇನರ್ ಹೈಜಾಕ್ ಪ್ರಕರಣ ನಡೆದ ಕೆಲ ದಿನಗಳ ಬಳಿಕ, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನನ್ನು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಕಿಶೋರ್ ಶೇಟ್ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದರು. ನಂತರ ಸಂದೀಪ್‌ನನ್ನು ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಕಂಟೇನರ್ ಹೈಜಾಕ್‌ಗೆ ಅವನೇ ಕಾರಣ ಎಂದು ಶಂಕಿಸಿದ್ದರು. ಮಾತ್ರವಲ್ಲ, ರೂ.400 ಕೋಟಿ ಹಣ ಕೊಡದಿದ್ದರೆ ಜೀವ ಉಳಿಯದು ಎಂದು ಬೆದರಿಕೆ ಹಾಕಿ, ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡು ಪಾರಾದ ಸಂದೀಪ್ ಪಾಟೀಲ, ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ತೆರಳಿ 2026, ಜ.1ರಂದು ದೂರು ದಾಖಲಿಸಿದ್ದಾನೆ. ಈ ದೂರಿನಲ್ಲಿ ರೂ.400 ಕೋಟಿ ನಗದು ಸಾಗಿಸುತ್ತಿದ್ದ ವಾಹನ ಅಪಹರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಜತೆಗೆ, ಇದೇ ದೂರಿನ ಆಧಾರದಲ್ಲಿ ಈವರೆಗೂ ಗುಪ್ತವಾಗಿದ್ದ ಕಂಟೇನರ್ ಹೈಜಾಕ್ ಪ್ರಕರಣ ಸಂಪೂರ್ಣ ಬಹಿರಂಗವಾಗಿದೆ.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಉಳಿದ ಇಬ್ಬರ ಬಂಧನವಾದ ಬಳಿಕವೇ ಕಂಟೇನರ್‌ಗಳು ಹಾಗೂ ಹಣ ಪತ್ತೆಯಾಗುವ ಸಾಧ್ಯತೆ ಇದೆ.
Discover more from Coastal Times Kannada
Subscribe to get the latest posts sent to your email.







Discussion about this post