ಕಡಬ ಜ.24: ಅಪ್ಪ- ಮಗನ ಮಧ್ಯೆ ಜಗಳ ನಡೆದು ತಂದೆ ಚೂರಿ ಇರಿತಕ್ಕೊಳಗಾಗಿದ್ದರೆ, ಅಪ್ರಾಪ್ತ ಬಾಲಕ ಮಗ ಕೋವಿಯಿಂದ ಗುಂಡು ಹಾರಿಸಲ್ಪಟ್ಟು ಮೃತಪಟ್ಟ ಘಟನೆ ಕಡಬ ಬಳಿಯ ರಾಮಕುಂಜದಲ್ಲಿ ನಡೆದಿದೆ.
ರಾಮಕುಂಜ ಗ್ರಾಮದ ವಸಂತ್ ಅಮೀನ್ ಎಂಬವರ ಪುತ್ರ ಮೋಕ್ಷ (17) ಎಂಬ ಬಾಲಕ ಮೃತಪಟ್ಟಿದ್ದರೆ, ತಂದೆ ಚೂರಿ ಇರಿತದಿಂದ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಸಂಜೆ ಹೊತ್ತಿಗೆ ಮನೆಯಲ್ಲಿ ತಂದೆ- ಮಗನ ನಡುವೆ ಸಂಘರ್ಷ ನಡೆದಿರುವ ಬಗ್ಗೆ ಅನುಮಾನಗಳಿದ್ದು, ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಈ ವೇಳೆ, ಬಾಲಕನೇ ಶೂಟ್ ಮಾಡಿಕೊಂಡಿದ್ದಾನೆಯೇ ಅಥವಾ ತಂದೆ ಮಗನಿಗೆ ಶೂಟ್ ಮಾಡಿದ್ದು ಕೊಂದಿದ್ದಾ ಎಂಬ ಬಗ್ಗೆ ಅನುಮಾನ ಇದೆ.
ಮೂಲತಃ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಳು ನಿವಾಸಿಯಾಗಿರುವ ವಸಂತ್ ರಿಗೆ ಪೆರ್ಲದ ಜಯಶ್ರೀ ಎಂಬವರೊಂದಿಗೆ ವಿವಾಹವಾಗಿತ್ತು. ಇವರಿಗೆ ಮೋಕ್ಷ ಏಕೈಕ ಪುತ್ರನಾಗಿದ್ದಾರೆ. ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಜಾಗ ಖರೀದಿಸಿದ್ದ ವಸಂತ್ ಇಲ್ಲೇ ವಾಸವಿದ್ದರು. ಕೆಲ ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಆಸ್ತಿ ವಿಚಾರವಾಗಿ ಜಗಳವಾಗಿದ್ದು, ಒಂದು ತಿಂಗಳ ಹಿಂದೆ ಪತ್ನಿ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ., ಮಗ ಜೊತೆಯಾಗಿ ವಾಸವಿದ್ದರು. ಮಗ ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ. ಸ್ಥಳಕ್ಕೆ ಕಡಬ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಮಧ್ಯೆ ತಂದೆಯೇ ಮಗನಿಗೆ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಆರೋಪಿಸಿ ವಸಂತ್ ಅಮೀನ್‌ರ ಪತ್ನಿ ಜಯಶ್ರೀ ಪೊಲೀಸ್ ದೂರು ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಜಯಶ್ರೀ ಪತಿಯೊಂದಿಗೆ ಮನಸ್ತಾಪಗೊಂಡು ಮಂಗಳೂರಿನ ತನ್ನ ತಾಯಿ ಮನೆಯಲ್ಲಿದ್ದರು. ಕಳೆದ ಒಂದು ವರ್ಷದಿಂದ ಮನೆಯಲ್ಲಿ ತಂದೆ ಮತ್ತು ಮಗ ಮಾತ್ರ ಇದ್ದರು ಎಂದು ಹೇಳಲಾಗುತ್ತಿದೆ. ಯಾವ ಕಾರಣಕ್ಕಾಗಿ ಜಗಳ ನಡೆದಿದೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
Discover more from Coastal Times Kannada
Subscribe to get the latest posts sent to your email.







Discussion about this post