ಮಂಗಳೂರು: ನಗರದ ಪಂಪ್‌ವೆಲ್ ಮಹಾವೀರ ವೃತ್ತದಲ್ಲಿ ಮಂಗಳೂರು ಜೈನ್ ಸೊಸೈಟಿ (ರಿ) ಇವರ ಮುಂದಾಳತ್ವ ದಲ್ಲಿ ಮರುಸ್ಥಾಪನೆಗೊಂಡ ಕಲಶವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶನಿವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾನವನ ಅಂತರಂಗ-ಬಹಿರಂಗ ಶುದ್ಧವಾಗಬೇಕು. ಮಂಗಳೂರಿಗೆ ಆಗಮಿಸುವ ಹಾಗೂ ತೆರಳುವವರಿಗೆ ವಿದಾಯ ಹಾಗೂ ಸ್ವಾಗತ ಕೋರುವ ಕಲಶವಾಗಿದೆ. ಎಲ್ಲರಿಗೂ ಶುಭವಾಗಲಿ ಎಂಬ ಆಶಯದಲ್ಲಿ ಈ ಪವಿತ್ರ ಕಲಶವನ್ನು ಸ್ಥಾಪಿಸಲಾಗಿದೆ ಎಂದರು.
ಸ್ವಾಭಿಮಾನದ ಸಂಕೇತ : ಯುಟಿ ಖಾದರ್ ನಾಮಫಲಕ ಅನಾವರಣಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಈ ಕಲಶ ಕರಾವಳಿಯ ಸಂಸ್ಕೃತಿ ಪರಂಪರೆ, ಧಾರ್ಮಿಕತೆ, ಸ್ವಾಭಿಮಾನದ ಸಂಕೇತ. ಮಹಾವೀರರ ಅಹಿಂಸಾ ಪರಮೋಧರ್ಮದ ಸಂದೇಶವನ್ನು ಸಾರುವ ಕಲಶ ಇದಾಗಿದ್ದು, ಅವರ ಚಿಂತನಾ ವಾಕ್ಯಗಳನ್ನೂ ಫಲಕಗಳಲ್ಲಿ ಅಳವಡಿಸಬೇಕು. ಈ ಮೂಲಕ ಜನತೆ ಆತ್ಮಾವಲೋಕನ ನಡೆಸಲು ನಾಂದಿಯಾಗಬೇಕು ಎಂದರು.
2016ರಲ್ಲಿ ಪಂಪ್‌ವೆಲ್ ಫ್ಲೈಓವರ್ ನಿರ್ಮಾಣದ ಸಂದರ್ಭದಲ್ಲಿ ಈ ಐತಿಹಾಸಿಕ ಕಲಶವನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ನಗರದ ಸಾಂಸ್ಕೃತಿಕ ಗುರುತಾಗಿದ್ದ ಈ ಕಲಶವನ್ನು ಮರುಸ್ಥಾಪಿಸಬೇಕೆಂಬ ನಿರಂತರ ಒತ್ತಾಯ ಕೇಳಿಬಂದಿತ್ತು. ಕಳೆದ ಕೆಲವು ತಿಂಗಳುಗಳಿಂದ ಇದರ ಮರುಸ್ಥಾಪನಾ ಕಾರ್ಯವು ವೇಗವಾಗಿ ನಡೆದಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು, ಜೈನ ಸೊಸೈಟಿಯ ಮುಂದಾಳತ್ವದಲ್ಲಿ ಈ ಮರುನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.
Discover more from Coastal Times Kannada
Subscribe to get the latest posts sent to your email.








Discussion about this post