ಮಂಗಳೂರು, ಫೆ 25: “ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ಐವತ್ತು ವರ್ಷಗಳಲ್ಲಿ ದೇಶ ಕಾಣದ ನಿರುದ್ಯೋಗ ಪ್ರಮಾಣ ಪ್ರಸ್ತುತ ದೇಶದಲ್ಲಿದೆ. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವು ಸಿಗುತ್ತಿಲ್ಲ. ಪದವಿ ಇದ್ದರೂ ಏನು ಪ್ರಯೋಜನವಿಲ್ಲದಂತಾಗಿದೆ” ಎಂದು ಜಸ್ಟೀಸ್ ಎಚ್ ಎನ್ ನಾಗಮೋಹನದಾಸ್ ಹೇಳಿದರು.
ಮಂಗಳೂರಿನ ಕಲ್ಲಾಪಿನಲ್ಲಿ ಫೆಬ್ರವರಿ 25ರಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ನ 12ನೇ ರಾಜ್ಯ ಸಮ್ಮೇಳನ ಆರಂಭವಾಗಿದ್ದು, ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಸ್ಟೀಸ್ ಎಚ್ ಎನ್ ನಾಗಮೋಹನದಾಸ್, “ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಯುವಜನರಿದ್ದಾರೆ. ವಿಮೋಚನಾ ಹೋರಾಟದಿಂದ ಹಿಡಿದು ಇಲ್ಲಿಯವರಿಗೆ ಭಾರತಕ್ಕಾಗಿ ಯುವಕರ ಕೊಡುಗೆ ಬಹಳ ಮಹತ್ವದ್ದಾಗಿದೆ. ಅಬ್ಬಕ್ಕ ರಾಣಿಯಂತಹ ಕಿಚ್ಚಿನ ನಾಯಕಿಯ ಜಾಗದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ. ಯುವಕರೆಂದರೆ ಬದಲಾವಣೆ, ಪ್ರಗತಿ, ಅನ್ಯಾಯ, ಶೋಷಣೆ, ದಬ್ಬಾಳಿಕೆ ವಿರುದ್ಧ ಹೋರಾಡುವ ಶಕ್ತಿಯಾಗಿದೆ. ಈ ಶಕ್ತಿ ಬಲಗೊಳ್ಳಲಿ ಎಂಬ ಆಶಯದೊಂದಿಗೆ ನಾನು ಸಮ್ಮೇಳನ ಉದ್ಘಾಟಿಸುತ್ತಿದ್ದೇನೆ” ಎಂದರು.
“ಎಲ್ಲಾ ಮಕ್ಕಳು ಒಂದೇ ಎನ್ನುತ್ತೇವೆ. ಆದರೆ ಶಿಕ್ಷಣದಲ್ಲಿ ಯಾಕೆ ತಾರತಮ್ಯ?. ಸಮಾನ ಶಿಕ್ಷಣದ ನೀತಿ ಜಾರಿಯಾಗಬೇಕಿದೆ. ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿ ಬರಬೇಕಾಗಿದೆ. ಹೊಸ ಶಿಕ್ಷಣ ನೀತಿಯ ಬಗ್ಗೆ ಚರ್ಚೆಯಾಗಬೇಕು. ಉದ್ಯೋಗ ಸೃಷ್ಟಿ ಕಡಿಮೆಯಾದಂತೆ ಅಪರಾಧೀಕರಣ, ಕೋಮುವಾದ, ಭಯೋತ್ಪಾದನೆ, ವೇಶ್ಯಾವಾಟಿಕೆ ಮೊದಲಾದವು ಹೆಚ್ಚಾಗುತ್ತದೆ. ನಿರುದ್ಯೋಗ ಸಮಸ್ಯೆಗೂ, ಕೋಮುವಾದ, ಅಪರಾಧಕ್ಕೂ ನಂಟಿದೆ ಎಂದು ಸರ್ಕಾರ ತಿಳಿದುಕೊಳ್ಳಬೇಕು” ಎಂದು ಹೇಳಿದರು.
ಸ್ವಾಗತ ಭಾಷಣ ಮಾಡಿದ ವಿಶ್ರಾಂತ ಜಿಲ್ಲಾಧಿಕಾರಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆದ ಎ.ಬಿ. ಇಬ್ರಾಹಿಂ, “ಜನರು ಭ್ರಮಾಲೋಕದಲ್ಲಿದ್ದ ರೀತಿ ಮತ ಚಲಾಯಿಸುತ್ತಿದ್ದಾರೆ. ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯಲಾಗುತ್ತದೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ನಾವು ಬುದ್ಧಿವಂತರು ಮತ್ತು ಅಕ್ಷರಸ್ಥರ ನಡುವೆ ಬೇರೆಯೇ ವ್ಯಾಖ್ಯಾನವನ್ನು ನೀಡಬೇಕಾಗಿದೆ ಎಂದು ಹೇಳಿದರು.
“ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ನೆಲವಿದು, ರಾಣಿ ಅಬ್ಬಕ್ಕರ ಮಾತೃ ಪ್ರಧಾನ ಸಮಾಜವಿದು. ಇದು ನಮಗೆ ಮಾದರಿಯಾಗಬೇಕಾದ ನೆಲ. ಇದು ಶೇಕಡ 100 ರಷ್ಟು ಅಕ್ಷರಸ್ಥರು ಇರುವ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಮ್ಮ ಜಿಲ್ಲೆ ಜಗತ್ತಿಗೆ ಮಾದರಿಯಾಗಬೇಕಾದ ಜಿಲ್ಲೆ. ಆದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ, ನಗರ ಕುಖ್ಯಾತಿ ಪಡೆಯುತ್ತಾ ಬಂದಿರುವ ನೆಲವಾಗಿದೆ. ಹೊರ ಜಿಲ್ಲೆಯವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಶ್ನಿಸುವಂತಾಗಿದೆ ಎಂದರು.
ಅಧ್ಯಕ್ಷ ಭಾಷಣ ಮಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ನೀವು ಪಾರ್ಲಿಮೆಂಟ್‌ನಲ್ಲಿ ಇಲ್ಲ, ನೀವು ಎಲ್ಲಿದ್ದೀರಿ ಎಂದು ನಮ್ಮನ್ನು ಕೇಳುತ್ತೀರಿ. ನೀವು ಬಿಲ್ಡರ್‌ಗಳ, ದನಿಗಳ ಜೊತೆ ಇರಬಹುದು. ಆದರೆ ನಾವು ಪ್ರಸ್ತುತ ಮುಚ್ಚಲಾದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ, ಶವ ಬಂಧನದಲ್ಲಿಟ್ಟು ಕುಟುಂಬದವರನ್ನು ಸತಾಯಿಸುವ ಖಾಸಗಿ ಆಸ್ಪತ್ರೆಗಳ ಹೊರಗೆ ಹೋರಾಟದಲ್ಲಿ, ಕುಡಿಯುವ ನೀರಿಗಾಗಿ ನಡೆದ ಚಳುವಳಿಯಲ್ಲಿ, ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಹೋರಾಟದಲ್ಲಿ ನಾವಿದ್ದೇವೆ. ನಾವು ಜನರ ಹೃದಯದಲ್ಲಿದ್ದೇವೆ. ನಾವು ಎಂದಿಗೂ ತಲೆತಗ್ಗಿಸುವವರಲ್ಲ. ನಾವು ಎತ್ತಿದ ತಲೆಯನ್ನು ನೀವು ಕತ್ತರಿಸಿದರೂ ಸರಿ, ನಾವೆಂದಿಗೂ ತಲೆ ತಗ್ಗಿಸಲ್ಲ ಎಂದು ಹೇಳಿದರು.
ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಿವೈಎಫ್ಐ ಕರ್ನಾಟಕ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಿದ್ದರು. ಡಿವೈಎಫ್ಐ ಕೇಂದ್ರ ಸಮಿತಿಯ ಜೆಕ್ ಸಿ. ಥಾಮಸ್, ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್, ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹಾರ್, ಆಶಾ ಬೋಳೂರು, ಎಸ್ಎಫ್ಐನ ರಾಜ್ಯ ಕಾರ್ಯದರ್ಶಿ ಭೀಮನಗೌಡ, ಸ್ವಾಗತ ಸಮಿತಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಬಿ.ಕೆ. ಇಮ್ತಿಯಾಝ್, ವಕೀಲ ರಾಮಚಂದ್ರ ಬಬ್ಬುಕಟ್ಟೆ, ಡಾ.ಜೀವನ್ ರಾಜ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post