ಚಿಕ್ಕಮಗಳೂರು: ನದಿಗೆ ಬಿದ್ದು ಸಾವನ್ನಪ್ಪಿದ ಮಗನ ಮೃತದೇಹ ಸಿಗುವ ಮುನ್ನವೇ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ. ರವಿಕಲಾ(48) ಮೃತರು.
ಮಲೆನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಪಿಕಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಕ್ಕದಲ್ಲೇ ಹರಿಯುತ್ತಿದ್ದ ಭದ್ರಾ ನದಿಗೆ ಉರುಳಿ ಬಿದ್ದರಿಂದ ರವಿಕಲಾ ಅವರ ಪುತ್ರ ಶಮಂತ್(23) ಸಾವನ್ನಪ್ಪಿದ್ದರು.
ಶಮಂತ್ ಹಲವು ದಿನಗಳಿಂದ ಪಿಕಪ್ ಜೀಪ್‌ನಲ್ಲಿ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದರು. ಗುರುವಾರ ಸಂಜೆ ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಗ್ರಾಮಕ್ಕೆ ಹೋಗುವಾಗ ಭದ್ರಾ ನದಿಗೆ ಬಿದ್ದಿದ್ದರು. ಕಾಫಿ ತೋಟದಿಂದ ಕಾರ್ಮಿಕರನ್ನ ಕರೆ ತರುವಾಗ ಅಪಘಾತ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು.
ಮಲೆನಾಡಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭದ್ರಾ ನದಿಯಿಂದ ಪಿಕಪ್ ವಾಹನವನ್ನು ಮೇಲೆತ್ತುವ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಆದರೆ, ಗುರುವಾರ ಸಂಜೆ ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ ವೇಳೆ ಮನೆ ಹಿಂದಿನ ಕೆರೆಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post