ಬೆಂಗಳೂರು: ಮಾದಕ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಡ್ರಗ್ಸ್ ಸೇವನೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ಖಚಿತವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಸಾಮಾನ್ಯವಾಗಿ ನಾವು ಯಾವುದೇ ಡ್ರಗ್ಸ್ ಪ್ರಕರಣವನ್ನು ದಾಖಲಿಸಿಕೊಂಡಾಗ, ಅದರಲ್ಲಿ ಆರೋಪಿಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಖಚಿತ ಪಡಿಸಲು ಮೊದಲಿಗೆ ರಕ್ತ ಹಾಗೂ ಮೂತ್ರದ ಸ್ಯಾಂಪಲ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡುತ್ತಿದ್ದೇವು. ಆದರೆ, ರಕ್ತ ಮತ್ತು ಮೂತ್ರದ ಸ್ಯಾಂಪಲ್‌ಗಳಲ್ಲಿ ಒಂದೆರಡು ದಿನಗಳ ಹಿಂದೆ ಡ್ರಗ್ಸ್ ಸೇವಿಸಿದ್ದರೆ ಮಾತ್ರ ವರದಿಯಲ್ಲಿ ಪಾಸಿಟಿವ್ ಬರುತ್ತಿತ್ತು ಎಂದರು.
ಅನೇಕ ಪ್ರಕರಣಗಳಲ್ಲಿ ಸುಮಾರು ದಿನಗಳ ಬಳಿಕ ನಾವು ಬಂಧಿಸಿದ್ದರೆ, ಅಂತಹ ಸಂದರ್ಭಗಳಲ್ಲಿ ರಕ್ತ ಮತ್ತು ಮೂತ್ರದ ಸ್ಯಾಂಪಲ್‌ಗಳಲ್ಲಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಷ್ಟವಾಗುತ್ತಿತ್ತು. ಈ ಕಾರಣದಿಂದ ನಾವು ನಮ್ಮ ಸಾಕ್ಷ್ಯಾಧಾರಗಳಿಗಾಗಿ ಕೂದಲು ಸ್ಯಾಂಪಲ್‌ಗಳನ್ನು ಕಳುಹಿಸುತ್ತಿದ್ದೇವು ಎಂದರು.
ಅಧ್ಯಯನದ ಪ್ರಕಾರ ಕೂದಲಿನಲ್ಲಿ ಒಂದು ವರ್ಷದವರೆಗೂ ಡ್ರಗ್ಸ್ ಇರುತ್ತದೆ. ಆ ಕಾರಣದಿಂದ ಈ ಪ್ರಕರಣದಲ್ಲಿ ಕಳೆದ ವರ್ಷ ನಾವು ಆರೋಪಿಗಳ ಕೂದಲು ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದ್‌ನ ಸಿಎಫ್‌ಎಸ್ಎಲ್ ಲ್ಯಾಬ್‌ಗೆ ಕಳುಹಿಸಿದ್ದೇವು. ಕರ್ನಾಟಕದಲ್ಲಿ ಕೂದಲು ಸ್ಯಾಂಪಲ್ ತೆಗೆದುಕೊಂಡು ಲ್ಯಾಬ್‌ಗೆ ಕಳುಹಿಸಿರುವುದು ಇದೇ ಪ್ರಥಮ ಬಾರಿಗೆ. ಈಗ ವರದಿ ಕೈಸೇರಿದ್ದು, ಅದರಲ್ಲಿ ಆರೋಪಿಗಳು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎಂದರು.
‘ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ವಿರೇನ್ ಖನ್ನಾ, ಬಿ.ಕೆ. ರವಿಶಂಕರ್, ರಾಹುಲ್ ತೋನ್ಸೆ ಹಾಗೂ ಲೋ ಪೆಪ್ಪರ್ ಡ್ರಗ್ಸ್ ಸೇವಿಸಿದ್ದು ವರದಿಯಿಂದ ಗೊತ್ತಾಗಿದೆ. ಆದಿತ್ಯ ಅಳ್ವ, ಶ್ರೀನಿವಾಸ್ ಹಾಗೂ ಇತರೆ ಆರೋಪಿಗಳ ವರದಿ ಬರುವುದು ಬಾಕಿ ಇದೆ’ ಎಂದೂ ತಿಳಿಸಿದರು.