ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ದುಬೈಯಲ್ಲಿ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿದೆ.
ಇದರೊಂದಿಗೆ ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ (ಏಕದಿನ ಹಾಗೂ ಟ್ವೆಂಟಿ-20 ಸೇರಿದಂತೆ) ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲಿನ ಮುಖಭಂಗಕ್ಕೊಳಗಾಗಿದೆ. ಈ ಹಿಂದಿನ 12 ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸಿತ್ತಾದರೂ ದುಬೈಯಲ್ಲಿ ನಡೆದ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮರುಕಳಿಸಲು ವಿರಾಟ್ ಕೊಹ್ಲಿ ಬಳಗಕ್ಕೆ ಸಾಧ್ಯವಾಗಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತ, ನಾಯಕ ವಿರಾಟ್ ಕೊಹ್ಲಿ (57) ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು.
ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ಯಾವುದೇ ಒತ್ತಡಕ್ಕೆ ಒಳಗಾಗಲಿಲ್ಲ. ಆರಂಭಿಕರಾದ ನಾಯಕ ಬಾಬರ್ ಆಜಂ (68*) ಹಾಗೂ ಮೊಹಮ್ಮದ್ ರಿಜ್ವಾನ್ (79*) ಶತಕದ ಜೊತೆಯಾಟದ ನೆರವಿನಿಂದ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಭರ್ಜರಿ ಗೆಲುವು ದಾಖಲಿಸಿದೆ.
ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಮೊದಲ ಸೋಲು:
ಸವಾಲಿನ ಮೊತ್ತ ಬೆನ್ನತ್ತಿದ ಪಾಕಿಸ್ತಾನಕ್ಕೆ ನಾಯಕ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಭಾರತೀಯ ಬೌಲರ್‌ಗಳನ್ನು ನಿರ್ಭೀತಿಯಿಂದ ಎದುರಿಸಿದರು.
10 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿತ್ತು. ಅಲ್ಲದೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 81 ರನ್‌ಗಳ ಅಗತ್ಯವಿತ್ತು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಕೇವಲ 40 ಎಸೆತಗಳಲ್ಲಿ ಫಿಫ್ಟಿ ಸಾಧನೆ ಮಾಡಿದರು.
Discover more from Coastal Times Kannada
Subscribe to get the latest posts sent to your email.
Discussion about this post