ಪುತ್ತೂರು, ನ.24: ಕಳೆದ ಏಳು ದಿನಗಳಿಂದ ನಾಪತ್ತೆಯಾಗಿದ್ದ ಮೈಸೂರಿನಲ್ಲಿ ಫೋಟೊಗ್ರಾಫರ್ ಆಗಿರುವ ಮೂಲತಃ ಮಂಗಳೂರು ನಿವಾಸಿ ಜಗದೀಶ್ (58) ಅವರ ಮೃತದೇಹ ಬುಧವಾರ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಡಿ ಸಮೀಪದ ಮುಗುಳಿ ಎಂಬಲ್ಲಿನ ಸರಕಾರಿ ರಕ್ಷಿತಾರಣ್ಯದಲ್ಲಿ ಪತ್ತೆಯಾಗಿದೆ.
ಅವರನ್ನು ಸಂಬಂಧಿಕರೇ ಕೊಲೆ ಮಾಡಿ ಹೂತು ಹಾಕಿದ್ದರು ಎಂದು ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಮಾವ ಬಾಲಕೃಷ್ಣ ರೈ, ಆತನ ಪುತ್ರ ಪ್ರಶಾಂತ್ ರೈ, ಪತ್ನಿ ಜಯಲಕ್ಷ್ಮೀ ಮತ್ತು ಪಕ್ಕದ ಮನೆಯ ನಿವಾಸಿ ಜೀವನ್ ಪ್ರಸಾದ್ ಬಂಧಿತ ಆರೋಪಿಗಳು.
ಜಗದೀಶ (52) ಕೊಲೆಯಾದವರು.
ಘಟನೆ ವಿವರ: ಮೂಲತಃ ಮಂಗಳೂರು ನಿವಾಸಿಯಾಗಿರುವ ಜಗದೀಶ್ ಮೈಸೂರಿನಲ್ಲಿ ಫೋಟೊಗ್ರಾಫರ್ ಆಗಿದ್ದರು. ಅವರು 3 ವರ್ಷಗಳ ಹಿಂದೆ ಕುಂಜೂರು ಪಂಜದಲ್ಲಿ ಸುಮಾರು 2 ಎಕರೆ ಜಮೀನು ಖರೀದಿಸಿದ್ದರು. ಆಗಾಗ ಇಲ್ಲಿಗೆ ಆಗಮಿಸಿ ಕೃಷಿಯನ್ನು ನೋಡಿಕೊಂಡು ಹೋಗುತ್ತಿದ್ದರು. ಅದೇ ರೀತಿ ನ.18ರಂದು ಜಮೀನು ನೋಡಿ ಹೋಗಲೆಂದು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿದ್ದರು. ಆಂದೇ ಹಿಂದಿರುಗಿ ಬರುವುದಾಗಿ ಮನೆಯವರಿಗೆ ತಿಳಿಸಿದ್ದ ಅವರು ಮನೆಗೆ ಹಿಂದಿರುಗಿರಲಿಲ್ಲ. ಈ ಬಗ್ಗೆ ಜಗದೀಶ್‌ರ ಪತ್ನಿ ಕುಟುಂಬಸ್ಥರಿಗೆ ತಿಳಿಸಿದ್ದು, ಮಂಗಳೂರಿನಲ್ಲಿ ವಾಸ್ತವ್ಯವಿರುವ ಜಗದೀಶ್‌ರ ಸಹೋದರ ಶಶಿಧರ್ ಅವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಜಗದೀಶ್‌ರ ನಾಪತ್ತೆಗೆ ಸಂಬಂಧಿಸಿ ಶಶಿಧರ್ ಅವರು ತಮ್ಮ ಮಾವ ಮತ್ತು ಅವರ ಪುತ್ರನ ಬಗ್ಗೆ ಶಂಕೆ ವ್ಯಕ್ತಪಡಿಸಿ ಮತ್ತೊಂದು ದೂರು ನೀಡಿದ್ದರು. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಜಗದೀಶ್ ರ ಕೊಲೆ ನಡೆಸಿದ ಪ್ರಕರಣ ಬಯಲಾಗಿದೆ.
ಆರೋಪಿಗಳಾದ ಜಗದೀಶ್‌ರ ಮಾವ ಬಾಲಕೃಷ್ಣ ರೈ, ಆತನ ಪುತ್ರ ಪ್ರಶಾಂತ್ ರೈ, ಪತ್ನಿ ಜಯಲಕ್ಷ್ಮೀ ಮತ್ತು ಪಕ್ಕದ ಮನೆಯ ನಿವಾಸಿ ಜೀವನ್ ಪ್ರಸಾದ್ ಎಂಬವರು ಸೇರಿಕೊಂಡು ಜಗದೀಶ್‌ರನ್ನು ಕೊಲೆಗೈದು ಮೃತದೇಹವನ್ನು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪುಳಿತ್ತಡಿ ಸಮೀಪದ ಮುಗುಳಿ ಎಂಬಲ್ಲಿನ ಸರಕಾರಿ ರಕ್ಷಿತಾರಣ್ಯದಲ್ಲಿ ಹೂತು ಹಾಕಿದ್ದರೆನ್ನಲಾಗಿದ್ದು, ಅದನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ, ಪುತ್ತೂರು ತಹಶೀಲ್ದಾರ್, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಬೆರಳಚ್ಚು ತಜ್ಞರು ತೆರಳಿ ಸ್ಥಳ ಮಹಜರು ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post