ಬೆಂಗಳೂರು: ನನ್ನ ಗಂಡ ಕಸ್ಟಮ್ಸ್‌ನಲ್ಲಿ ಕೆಲಸ ಮಾಡೋದು. ಕಸ್ಟಮ್ಸ್‌ನಲ್ಲಿ ವಶಪಡಿಸಿಕೊಳ್ಳೋ ಚಿನ್ನದಲ್ಲಿ ಒಂದು ಭಾಗ ಇವರಿಗೆ ಸಿಗುತ್ತದೆ. ಅದನ್ನು ನಿಮಗೆ ಕಡಿಮೆ ರೇಟಿಗೆ ಕೊಡಿಸ್ತೇನೆ ಎಂದು ಹೇಳಿ ಮಹಿಳೆಯೊಬ್ಬರು ಇನ್ನೊಬ್ಬರು ಮಹಿಳೆಯನ್ನು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

‘ಧನುಷ್ಯಾ ಅಲಿಯಾಸ್ ರಾಚೆಲ್ ಹಾಗೂ ಅವರ ಪತಿ ದರ್ಬಿನ್ ದಾಸ್ ಅಲಿಯಾಸ್ ಮೋಹನ್ ದಾಸ್ ಬಂಧಿತರು. ದೇವನಹಳ್ಳಿ ಹಾಗೂ ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ನಿವಾಸಿಗಳನ್ನು ವಂಚಿಸಿ ಪರಾರಿಯಾಗಿದ್ದ ಈ ದಂಪತಿಯನ್ನು ಉಡುಪಿಯಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸರು ಹೇಳಿದರು. ‘ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದ ದಂಪತಿ, ಪದೇ ಪದೇ ಊರು ಬದಲಾಯಿಸುತ್ತಿದ್ದರು. ವಾಸವಿದ್ದ ಸ್ಥಳಗಳಲ್ಲಿ ಜನರನ್ನು ಪರಿಚಯ ಮಾಡಿಕೊಂಡು ವಂಚಿಸಿ ಪರಾರಿಯಾಗುತ್ತಿದ್ದರು. ಇವರಿಂದ ಸದ್ಯ ₹ 34.50 ಲಕ್ಷ ನಗದು ಹಾಗೂ 106 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ದಂಪತಿ ಇಂದಿರಾ ನಗರದಲ್ಲಿ ವಾಸವಾಗಿದ್ದರು. ಐಷಾರಾಮಿ ಜೀವನ. ಧನುಷ್ಯನಿಗೆ ಪಕ್ಕದ ಮನೆಯ ಸ್ನೇಹ ಭಾಗವತ್ ಅವರ ಪರಿಚಯ ಆಗಿತ್ತು. ಸ್ನೇಹ ಅವರು ಇಂದಿರಾ ನಗರದ ನೈಲ್ಸ್ ಬಾಕ್ಸ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೊಂದು ಧನುಷ್ಯ ಸ್ನೇಹ ಭಾಗವತ್ ಅವರ ಜತೆ ಮಾತನಾಡುತ್ತಾ, ನನ್ನ ಗಂಡ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಸೀಜ್ ಮಾಡಿರೋ ಬಂಗಾರ ಸಿಗ್ತದೆ. ಬೇಕಿದ್ದರೆ ನಿಮಗೆ ಕೊಡಿಸುತ್ತೇನೆ ಎಂದು ಹೇಳಿದ್ದಳು. ಸ್ನೇಹ ಅವರು ಕಡಿಮೆ ಬೆಲೆಗೆ ಸಿಕ್ಕಿದರೆ ಸಿಕ್ಕಲಿ ಎಂದು ಹಣ ಕೊಟ್ಟರು. ಪ್ರತಿ ಬಾರಿಯೂ ಬೇರೆ ಬೇರೆ ರೀತಿಯಲ್ಲಿ ಹಣ ಕೇಳುತ್ತಾ ಅಂತಿಮವಾಗಿ ಅದು 68 ಲಕ್ಷ ರೂ. ತಲುಪಿತ್ತು! ಆಗ ಸ್ನೇಹ ಭಾಗವತ್ ಅವರಿಗೆ ತಾನು ವಂಚನೆಯ ಸುಳಿಗೆ ಸಿಕ್ಕಿದ್ದಾಗಿ ಗೊತ್ತಾಗಿದೆ. ಅವರು ಬಳಿಕ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಗ ಈ ದಂಪತಿ ಪೊಲೀಸರ ಅತಿಥಿಗಳಾಗಿದ್ದಾರೆ.

ಉದ್ಯೋಗ ಆಮಿಷ: ‘ದೇವನಹಳ್ಳಿಯ ಶಾಲೆಯೊಂದರ ಶಿಕ್ಷಕಿ ಶ್ವೇತಾ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ₹ 96,750 ಪಡೆದಿದ್ದರು. ನಂತರ, ಉದ್ಯೋಗ ಕೊಡಿಸದೇ ಪರಾರಿಯಾಗಿದ್ದರು. ಈ ಬಗ್ಗೆ ಶಿಕ್ಷಕಿ ಶ್ವೇತಾ, ದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.
‘ಕಡಿಮೆ ಬೆಲೆಗೆ ಐ–ಫೋನ್, ಲ್ಯಾಪ್‌ಟಾಪ್ ಮಾರುವುದಾಗಿಯೂ ಆರೋಪಿಗಳು ಹೇಳುತ್ತಿದ್ದರು. ಅಕಾಡೆಮಿ ಕೆಲಸಗಾರರು, ಶಾಲಾ ಶಿಕ್ಷಕರು, ಮಕ್ಕಳ ಪೋಷಕರು, ನೆರೆ ಮನೆಗಳ ನಿವಾಸಿಗಳು ಸೇರಿ ಹಲವರನ್ನು ಆರೋಪಿಗಳು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

Discover more from Coastal Times Kannada
Subscribe to get the latest posts sent to your email.








Discussion about this post