ಬಾಂಗ್ಲಾದೇಶ: ಸೋಮವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆ ಮೂಲಕ ಭಾರತೀಯ ನಾರಿಯರು ಸತತ ಎರಡನೇ ಬಾರಿಗೆ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.
2012ರಲ್ಲಿ ಬಿಹಾರದಲ್ಲಿ ಕೊನೆಯ ಬಾರಿ ವಿಶ್ವಕಪ್ ಪಂದ್ಯ ನಡೆದಿತ್ತು. ಆ ಬಳಿಕ 13 ವರ್ಷಗಳ ನಂತರ ಎರಡನೇ ಆವೃತ್ತಿಯ ಮಹಿಳೆಯರ ವಿಶ್ವಕಪ್ ಟೂರ್ನಿ ಆಯೋಜಿಸಲಾಗಿತ್ತು. ಮೊದಲ ಆವೃತ್ತಿಯಲ್ಲಿ ಕೂಡ ಭಾರತ ತಂಡ ಚಾಂಪಿಯನ್ ಆಗಿತ್ತು.

ಸತತ 12 ಗೆಲುವು: ಈ ಎರಡೂ ಕೂಟಗಳ 12 ಪಂದ್ಯಗಳನ್ನು (6+6) ಗೆಲ್ಲುವ ಮೂಲಕ ಭಾರತದ ವನಿತೆಯರು ವಿಶ್ವಕಪ್ ಕಬಡ್ಡಿಯಲ್ಲಿ ಅಜೇಯ ಅಭಿಯಾನ ಕಾಯ್ದುಕೊಂಡರು. ಚೈನೀಸ್ ತೈಪೆ ವಿರುದ್ಧ ಆಡಿದ ಮೂರೂ ಪಂದ್ಯಗಳನ್ನು ಭಾರತ ಜಯಿಸಿತು. ಇದರಲ್ಲಿ ಒಂದು ಗೆಲುವು 2023ರ ಏಷ್ಯನ್ ಗೇಮ್ಸ್ ಫೈನಲ್ ನಲ್ಲಿ ಒಲಿದಿತ್ತು. ಅಂತರ 26 25.
ಬಲವಾದ ಡಿಫೆನ್ಸ್ ಮತ್ತು ಪರಿಣಾಮಕಾರಿ ರೈಡಿಂಗ್ ಕಾಂಬಿನೇಶನ್ ಮೂಲಕ ಭಾರತ ಹೋರಾಟ ಆರಂಭಿಸಿತು. ಮಧ್ಯಾಂತರದ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಸಂಜುದೇವಿ ಮೊದಲ ಅಂಕ ತಂದಿತ್ತರು. ಆರಂಭದಲ್ಲಿ ಚೈನೀಸ್ ತೈಪೆ ಆಟ ಬಿರುಸಿನಿಂದ ಕೂಡಿತ್ತು. 13 12, 17 14… ಹೀಗೆ ಪೈಪೋಟಿ ಸಾಗಿತು. ವಿರಾಮದ ವೇಳೆ ಭಾರತ 20 16 ಲೀಡ್ ಗಳಿಸಿತ್ತು.
ಪಂದ್ಯದ ಮುಕ್ತಾಯಕ್ಕೆ ಇನ್ನೇನು 4 ನಿಮಿಷ ಇರುವಾಗ, ಚೈನೀಸ್ ತೈಪೆ ಸೂಪರ್ ಟ್ಯಾಕಲ್ ಮೂಲಕ ಅಂತರವನ್ನು 30 26ಕ್ಕೆ ತಂದು ಭರವಸೆ ಮೂಡಿಸಿತು. ಆದರೆ ಎದುರಾಳಿಯನ್ನು ಆಲೌಟ್ ಮಾಡುವ ಮೂಲಕ ಭಾರತ ಮೇಲುಗೈ ಸಾಧಿಸಿತು.
ನಾಯಕಿ ರೀತು ನೇಗಿ, ಉಪನಾಯಕಿ ಪುಷ್ಪಾ ರಾಣಾ, ಚಂಪಾ ಠಾಕೂರ್, ಭಾವನಾ ಠಾಕೂರ್, ಸಾಕ್ಷಿ ಶರ್ಮ ಅವರೆಲ್ಲ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದರು. ಸುರತ್ಕಲ್ ನ ಇಡ್ಯಾ ನಿವಾಸಿ ಧನಲಕ್ಷ್ಮೀ ಪೂಜಾರಿ ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಏಕೈಕ ಆಟಗಾರ್ತಿ ಆಗಿದ್ದರು. ಭಾರತದ ಗೆಲುವಿನಲ್ಲಿ ಪ್ರಧಾನ ಕೋಚ್ ತೇಜಸ್ವಿನಿ, ಸಹಾಯಕ ಕೋಚ್ ಪ್ರಿಯಾಂಕಾ ಅವರ ಪಾತ್ರ ನಿರ್ಣಾಯಕವಾಗಿತ್ತು.
ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ : ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಗೆದ್ದ ಖುಷಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘2025ರ ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು. ಅವರು ಅತ್ಯುತ್ತಮ ಕ್ರೀಡಾ ಸಮರ್ಪಣಾ ಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಈ ಗೆಲುವು ಅಸಂಖ್ಯಾತ ಯುವಕರಿಗೆ ಸ್ಫೂರ್ತಿ’ ಎಂದಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post