ನವದೆಹಲಿ: ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದ್ದು, ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ ಸೇರಿ ಆರು ಸಾಧಕರನ್ನು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡದ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಹಾಗೂ ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಐವರು ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ದಿಂದ ಡಾ. ಖಾದರ್ ವಲ್ಲಿ ದುಡೆ ಕುಲ್ಲಾ, ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಪಸರಿಸಲು ಶ್ರಮಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ತಮಟೆಯ ತಂದೆಯೆಂದು ಪ್ರಖ್ಯಾತರಾದ ಚಿಕ್ಕಬಳ್ಳಾಪುರದ ಪಿಂಡಿ ಪಾಪನಹಳ್ಳಿ ಮುನಿವೆಂಕಟಪ್ಪ, ಬೀದರ್‌ನ ಕಲಾವಿದ ಷಾ ರಶೀದ್ ಅಹ್ಮದ್ ಖಾದ್ರಿ, ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾಮನ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಸಾಧಕರು.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಎಸ್.ಎಂ.ಕೃಷ್ಣ ಅವರು ಕೆಲವು ವರ್ಷಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇತ್ತೀಚೆಗೆ ಸಕ್ರೀಯ ರಾಜಕಾರಣದಿಂದ ನಿವೃತ್ತರಾಗಿದ್ದರು. ಅವರನ್ನು ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮವಿಭೂಷಣಕ್ಕೆ ಆಯ್ಕೆ ಮಾಡಲಾಗಿದೆ. ಏಪ್ರಿಲ್–ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದಿಂದ ಎಸ್.ಎಂ. ಕೃಷ್ಣ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ಪದ್ಮವಿಭೂಷಣಕ್ಕೆ ಆರು ಮಂದಿ, ಪದ್ಮಭೂಷಣಕ್ಕೆ 9 ಸಾಧಕರು, ಪದ್ಮಶ್ರೀಗೆ 91 ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಮಂಗಳವಾರ ನಿಧನರಾದ ಗುಜರಾತ್‌ನ ಬಾಲಕೃಷ್ಣ ದೋಶಿ, ಮಹಾರಾಷ್ಟ್ರದ ಕಲಾವಿದ ಜಾಕೀರ್ ಹುಸೇನ್, ಪಶ್ಚಿಮ ಬಂಗಾಳದ ವೈದ್ಯ (ಮರಣೋತ್ತರ) ದಿಲೀಪ್ ಮಹಲನಬೀಸ್, ಅಮೆರಿಕದಲ್ಲಿ ನೆಲೆಸಿರುವ ಶ್ರೀನಿವಾಸ ವರದಾನ್ (ವಿಜ್ಞಾನ ಮತ್ತು ತಂತ್ರಜ್ಞಾನ), ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಪದ್ಮಶ್ರೀ: ಅಂಡಮಾನ್ ಮತ್ತು ನಿಕೋಬಾರ್‌ನ ನಿವೃತ್ತ ವೈದ್ಯ ರತನ್ ಚಂದ್ರ ಕರ್, ಗುಜರಾತ್‌ನ ಸಿದ್ಧಿ ಬುಡಕಟ್ಟು ಸಮುದಾಯದ ಏಳಿಗೆಗೆ ಶ್ರಮಿಸಿದ ಸಾಮಾಜಿಕ ಕಾರ್ಯಕರ್ತೆ ಹೀರಾಬಾಯಿ ಲೋಬಿ, ಮಧ್ಯಪ್ರದೇಶದ ವೈದ್ಯ ಮುನೀಶ್ವರ ಚಂದರ್ ದಾವರ್, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ ರಾಮ್‌ಕ್ವಿಂಬಾವೆ ನೆವ್ಮೆ, ಕೇರಳದ ಸಾಮಾಜಿಕ ಕಾರ್ಯಕರ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವಿ.ಪಿ.ಅಪ್ಪುಕುಟ್ಟನ್ ಪೊಡುವಾಳ್, ಆಂಧ್ರ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಸಂಕುರತ್ರಿ ಚಂದ್ರಶೇಖರ್, ಪ್ರಾಣಿಗಳ ಕಲ್ಯಾಣಕ್ಕಾಗಿ ಶ್ರಮಿಸಿದ ತಮಿಳುನಾಡಿನ ವಡಿವೇಳ್ ಗೋಪಾಲ್ ಮತ್ತು ಮಾಸಿ ಸಡೈಯನ್, ಸಿಕ್ಕಿಂನ ಸಾವಯವ ಕೃಷಿಕ ತೂಲಾ ರಾಮ್ ಉಪ್ರೇತಿ, ಹಿಮಾಚಲ ಪ್ರದೇಶದ ಸಾವಯವ ಕೃಷಿಕ ನೆಕ್ರಂ ಶರ್ಮ, ಜಾರ್ಖಂಡ್‌ನ ಲೇಖಕ ಜಾನುಂ ಸಿಂಗ್ ಸೋಯ್, ಪಶ್ಚಿಮ ಬಂಗಾಳದ ಧಾನಿರಾಮ್ ಟೊಟೊ, ತೆಲಂಗಾಣದ 80ರ ಹರೆಯದ ಭಾಷಾ ವಿದ್ವಾಂಸ ಬಿ.ರಾಮಕೃಷ್ಣ ರೆಡ್ಡಿ, ಛತ್ತೀಸಘಡದ ಅಜಯ್ ಕುಮಾರ್ ಮಾಂಡವಿ, ಮಿಜೊರಾಂನ ಕಲಾವಿದೆ ಕೆ.ಸಿ.ರುನ್‌ರೆಮ್ ಸಂಗಿ, ಪಶ್ಚಿಮ ಬಂಗಾಳದ ಕಲಾವಿದ ಮಂಗಲ ಕಾಂತಿ ರಾಯ್, ಛತ್ತೀಸಘಡದ ನೃತ್ಯಪಟು ದೋಮರ್ ಸಿಂಗ್ ಕುನ್ವಾರ್, ಮಹಾರಾಷ್ಟ್ರದ ರಂಗ ಕಲಾವಿದ ಪರಶುರಾಮ್ ಕೊಮಾಜಿ ಖೂನೆ, ಜಮ್ಮು ಮತ್ತು ಕಾಶ್ಮೀರದ ಸಂತೂರ್ ಕಲಾವಿದ ಗುಲಾಂ ಮಹಮ್ಮದ್ ಜಾಜ್, ಗುಜರಾತ್‌ನ ಕಲಾವಿದ ಭಾನುಬಾಯ್ ಚಿತಾರ, ಗುಜರಾತ್‌ನ ಕಲಾವಿದ ಪರೇಶ್ ರಾಥ್ವಾ, ಬಿಹಾರದ ಕಪಿಲ್ ದೇವ್ ಪ್ರಸಾದ್ ಅವರು ಸೇರಿದಂತೆ 91 ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post