ಉಡುಪಿ: ಪ್ರವಾಸಿಗರನ್ನು ವಿಹಾರಕ್ಕೆ ಕರೆದೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಮಗುಚಿದ ಪರಿಣಾಮ ಇಬ್ಬರು ಮೃತಪಟ್ಟು, ಒಬ್ಬರು ಗಂಭೀರಗೊಂಡು ಹಲವು ಮಂದಿ ಅಸ್ವಸ್ಥಗೊಂಡ ಘಟನೆ ಜ.26ರ ಸೋಮವಾರ ಬೆಳಗ್ಗೆ ಕೋಡಿಬೆಂಗ್ರೆ ಬೀಚ್ ಸಮೀಪ ನಡೆದಿದೆ.
ಶಂಕರಪ್ಪ (22), ಸಿಂಧು (23) ಮೃತರು. ದೀಶಾ (26) ಎಂಬವರ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಧರ್ಮರಾಜ (26) ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದ ಪ್ರವಾಸಿಗರನ್ನು ವಿಹಾರಕ್ಕೆಂದು ಮಲ್ಪೆ ಡೆಲ್ಟಾ ಬೀಚ್ ಪಾಯಿಂಟ್‌ನಿಂದ ಕರೆದೊಯ್ಯುತ್ತಿದ್ದ ದೋಣಿ ಹಂಗಾರಕಟ್ಟೆ ಹಡಗು ನಿರ್ಮಾಣ ಪ್ರದೇಶದ ಬಳಿ ನದಿ ಮತ್ತು ಸಮುದ್ರ ಸೇರುವ ಅಳಿವೆ ಬಾಗಿಲಿನಲ್ಲಿ ಮಗುಚಿ ಬಿದ್ದಿದೆ. ಇದರಲ್ಲಿ ಸುಮಾರು 14 ಮಂದಿ ಪ್ರವಾಸಿಗರಿದ್ದು, ಇವರು ಯಾರು ಕೂಡ ಲೈಫ್ ಜಾಕೆಟ್ ಧರಿಸಿಲ್ಲ ಎಂದು ತಿಳಿದುಬಂದಿದೆ.
ದೋಣಿಯಲ್ಲಿದ್ದವರು ಮೈಸೂರಿನ ಸರಸ್ವತಿಪುರಂನಲ್ಲಿರುವ ಕಾಲ್ ಸೆಂಟರ್ ವೊಂದರ ಉದ್ಯೋಗಿಗಳು ಎಂದು ವರದಿಯಾಗಿದೆ. ‘ವೇವ್‌ರೈಡರ್ಸ್’ (Waveriders) ಕಂಪನಿಗೆ ಸೇರಿದ ಈ ದೋಣಿಯಲ್ಲಿ ಒಟ್ಟು 14 ಮಂದಿ ಪ್ರವಾಸಿಗರಿದ್ದರು. ದುರಂತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಇತರ ದೋಣಿಯಲ್ಲಿದ್ದವರು ಎಲ್ಲರನ್ನೂ ರಕ್ಷಿಸಿ ದಡಕ್ಕೆ ತಂದಿದ್ದಾರೆ.
ಘಟನೆಯ ವೇಳೆ ನಾಲ್ವರು ಗಂಭೀರ ಸ್ಥಿತಿಯಲ್ಲಿದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಮಲ್ಪೆ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಅದೇ ದೋಣಿಯ ಪ್ರಯಾಣಿಕರೊಬ್ಬರು ನೀಡಿದ ಮಾಹಿತಿ ಪ್ರಕಾರ, ದೋಣಿಯಲ್ಲಿದ್ದ ಎಲ್ಲರಿಗೂ ಲೈಫ್ ಜಾಕೆಟ್ ನೀಡಲಾಗಿತ್ತು, ಆದರೆ ಎಲ್ಲರೂ ಅದನ್ನು ಧರಿಸಿರಲಿಲ್ಲ ಎಂದು ಹೇಳಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post