ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ನಡೆದಿರುವ ಎಲ್ಲ ಧರ್ಮಾಧಾರಿತ ರಾಜಕೀಯ ಹತ್ಯೆಗಳ ಬಗ್ಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು. ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನಡೆದ ಧರ್ಮಾಧಾರಿತ ರಾಜಕೀಯ ಹತ್ಯೆಗಳಲ್ಲಿ ಶರತ್ ಮಡಿವಾಳ, ಅಶ್ರಫ್, ಜಲೀಲ್, ಮಸೂದ್, ಪ್ರವೀಣ್ ನೆಟ್ಟಾರು ಇನ್ನೂ ಅನೇಕ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರಲ್ಲಿ ಬಿಜೆಪಿ ಮತ್ತು ಎಸ್‌ಡಿಪಿಐ ಪಕ್ಷಗಳ ಕಾರ್ಯಕರ್ತರು ಇರಬಹುದು. ಆದರೆ, ಒಬ್ಬರೇ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಇಲ್ಲ ಎಂದು ನಾನು ಅನೇಕ ಬಾರಿ ಪುನರುಚ್ಚರಿಸಿದ್ದೇನೆ. ಇದನ್ನೂ ಕೂಡ ಗಂಭೀರವಾಗಿ ಪರಿಗಣಿಗಬೇಕಾಗಿದೆ’ ಎಂದರು.
ಯಾವ ಮತೀಯ ಸಂಘಟನೆಗಳ ಕುಮ್ಮಕ್ಕಿನಿಂದ ಇಂತಹ ಹತ್ಯೆಗಳು ನಡೆದಿವೆ, ಇದರ ಹಿಂದಿರುವ ವ್ಯಕ್ತಿಗಳು ಯಾರ ಎಂಬ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು, ಸತ್ಯ ಹೊರಬಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಹತ್ಯೆಗಳು ನಿಂತು, ಸಾಮಾಜಿಕ ಸಾಮರಸ್ಯ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಕಾಂಗ್ರೆಸ್ ಜಿಲ್ಲಾ ಘಟಕ ಮುಂದಾಗಿದೆ. ಈ ಬಗ್ಗೆ ಕೂಡ ತನಿಖೆ ನಡೆಯಬೇಕು. ತಪ್ಪು ಕಂಡುಬಂದಲ್ಲಿ ಶಿಕ್ಷೆ ಆಗಬೇಕು ಶಿಕ್ಷೆಯಾದಲ್ಲಿ ಇಂತಹ ಹೇಳಿಕೆ ನೀಡುವವರಿಗೆ ಪಾಠವಾಗುತ್ತದೆ ಎಂದು ರಮಾನಾಥ ರೈ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post