ಬೆಂಗಳೂರು: ಎರಡು ದಿನಗಳ ತೀವ್ರ ಚರ್ಚೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಂಪುಟದ ನೂತನ ಸಚಿವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಮೇ 27, ಶನಿವಾರ ಬೆಳಗ್ಗೆ 24 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸೇರಿದಂತೆ ಕೇಂದ್ರದ ಪ್ರಮುಖ ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಮಾತುಕತೆ ನಡೆಸಿದ ಬಳಿಕ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಇದಕ್ಕೂ ಮುನ್ನ ರಾಜ್ಯದಲ್ಲಿ ಜಾತಿ ಮತ್ತು ಪ್ರದೇಶಗಳ ಮಾನದಂಡ ಹಿಡಿದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬುಧವಾರ ( ಮೇ 25) ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ಬಗ್ಗೆ ಚರ್ಚಿಸಿದ್ದರು.
ಉತ್ತರ ಕನ್ನಡ ಜಿಲ್ಲೆಯ ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯ ಆಪ್ತರಾಗಿರುವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ತಿನ ನಾಯಕರಾಗಿರುವ ಮತ್ತು ದಕ್ಷಿಣ ಕನ್ನಡ ಮೂಲದ ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್, ತುಮಕೂರು ಜಿಲ್ಲೆಯ ಹಿರಿಯ ಶಾಸಕ ಟಿಬಿ ಜಯಚಂದ್ರ, ಮೈಸೂರಿನ ಆರು ಬಾರಿಯ ಶಾಸಕ ತನ್ವೀರ್ ಸೇಠ್, ಸಚಿವ ಸ್ಥಾನಕ್ಕೆ ತೀವ್ರ ಲಾಬಿ ನಡೆಸಿದ್ದ ವಿನಯ ಕುಲಕರ್ಣಿಗೆ ಸಚಿವ ಸ್ಥಾನ ಸಿಕ್ಕಿಲ್ಲ. 135 ಶಾಸಕರು ಗೆದ್ದಿರುವುದರಿಂದ ಪರಿಷತ್ತಿನ ಯಾವುದೇ ಸದಸ್ಯನಿಗೂ ಸಚಿವ ಸ್ಥಾನ ನೀಡಿಲ್ಲ ಎನ್ನಲಾಗುತ್ತಿದೆ. ಡಿಕೆಶಿ ಆಪ್ತರೂ ಆಗಿರುವ ಬಿಕೆ ಹರಿಪ್ರಸಾದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಚಿವ ಸ್ಥಾನ ಖಚಿತ ಎನ್ನಲಾಗಿತ್ತು. ಆದರೆ ಸಿದ್ದರಾಮಯ್ಯ ಜೊತೆಗೆ ವೈಮನಸ್ಸು ಹೊಂದಿರುವುದರಿಂದ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲ ಎನ್ನಲಾಗುತ್ತಿದೆ.
ಜಾತಿ ಆಧಾರಿತ ಲೆಕ್ಕಾಚಾರ : ವಿಸ್ತೃತ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಲ್ವರು ಹೊಸ ಸಚಿವರು ಮತ್ತು ಒಕ್ಕಲಿಗ ಸಮುದಾಯದಿಂದ ನಾಲ್ವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ತಲಾ ಇಬ್ಬರು, ಮುಸ್ಲಿಂ ಸಮುದಾಯದಿಂದ ಒಬ್ಬರು, ಬ್ರಾಹ್ಮಣ ಮತ್ತು ಮಹಿಳೆ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಪ್ರಮಾಣವಚನ ಸ್ವೀಕರಿಸಲಿರುವ ಸಂಭಾವ್ಯ ಸಚಿವರು ಇವರೇ ನೋಡಿ :
1. ಹೆಚ್.ಕೆ.ಪಾಟೀಲ್
2. ಕೃಷ್ಣ ಭೈರೇಗೌಡ
3. ಎನ್. ಚಲುವರಾಯಸ್ವಾಮಿ
4. ಕೆ.ವೆಂಕಟೇಶ್
5. ಡಾ.ಹೆಚ್.ಸಿ.ಮಹದೇವಪ್ಪ
6. ಈಶ್ವರ ಖಂಡ್ರೆ
7. ಕೆ.ಎನ್.ರಾಜಣ್ಣ
8. ದಿನೇಶ್ ಗುಂಡೂರಾವ್
9. ಶರಣಬಸಪ್ಪ ದರ್ಶನಾಪುರ್
10. ಶಿವಾನಂದ ಪಾಟೀಲ್
11. ಆರ್.ಬಿ.ತಿಮ್ಮಾಪುರ
12. ಎಸ್.ಎಸ್.ಮಲ್ಲಿಕಾರ್ಜುನ
13. ಶಿವರಾಜ ತಂಗಡಗಿ
14. ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್
15. ಮಂಕಾಳು ವೈದ್ಯ
16. ಸಂತೋಷ್ ಲಾಡ್
17. ಎನ್ ಎಸ್ ಬೋಸೆರಾಜು
18. ಬೈರತಿ ಸುರೇಶ್
19. ಮಧು ಬಂಗಾರಪ್ಪ
20. ಎಂ.ಸಿ.ಸುಧಾಕರ್
21. ಬಿ.ನಾಗೇಂದ್ರ
22. ಲಕ್ಷ್ಮೀ ಹೆಬ್ಬಾಳ್ಕರ್
23. ರಹೀಂ ಖಾನ್
24. ಡಾ. ಸುಧಾಕರ್