ಕೊಚ್ಚಿ, ಕೇರಳ: ‘ಮೀ ಟೂ’ ಅಭಿಯಾನ ಪ್ರಾರಂಭವಾಗಿ ವರ್ಷಗಳೇ ಆಗಿವೆ. ಈ ಅಭಿಯಾನ ಹಲವು ಮಹಿಳಾ ಪೀಡಕ ಪುರುಷರ ನಿಜ ಬಣ್ಣವನ್ನು ಬಯಲಿಗೆ ಎಳೆದಿದೆ. ಹಲವು ನಟಿಯರು ಇಂದಿಗೂ ಸಹ ತಮಗಾಗಿರುವ ಲೈಂಗಿಕ ದೌಜರ್ನ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ವಿಶೇಷವಾಗಿ ಚಿತ್ರರಂಗದಲ್ಲಿ ಈ ಅಭಿಯಾನ ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಇತ್ತೀಚೆಗೆ ಕೇರಳ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಹೇಮಾ ಈ ಸಮಿತಿಯ ಮುಖ್ಯಸ್ಥಿಕೆ ವಹಿಸಿದ್ದರು. ಸಮಿತಿ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರ ಬೆನ್ನಲ್ಲೆ ಇದೀಗ ಹಿರಿಯ ನಟಿಯೊಬ್ಬರು ತಮಗೆ ನಿರ್ದೇಶಕನೊಬ್ಬನಿಂದ ಆದ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕತೆಗಾರ ಹಾಗೂ ನಟನೂ ಆಗಿರುವ ಹಾಗೂ ಈಗ ಕೇರಳ ಚಿತ್ರಕಲಾ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ರಂಜಿತ್ ವಿರುದ್ಧ ಬೆಂಗಾಲಿ ಚಿತ್ರರಂಗದ ಹಿರಿಯ ನಟಿ ಶ್ರೀಲೇಖ ಮಿತ್ರ ಮೀಟೂ ಆರೋಪ ಮಾಡಿದ್ದಾರೆ. ರಂಜಿತ್, ಮಲಯಾಳಂ ಚಿತ್ರರಂಗದ ಹಿರಿಯ ಮತ್ತು ಗೌರವಾನ್ವಿತ ನಿರ್ದೇಶಕ, ಇದೀಗ ಈ ನಿರ್ದೇಶಕನ ವಿರುದ್ಧ ಬೆಂಗಾಲಿ ನಟಿ ಆರೋಪ ಮಾಡಿರುವುದು ಮಲಯಾಳಂ ಚಿತ್ರರಂಗದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ನಟಿ ಹೇಳಿರುವಂತೆ 2009 ರಲ್ಲಿ ಬಿಡುಗಡೆ ಆದ ಮಮ್ಮುಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ‘ಪಲರಿ ಮಾಣಿಕ್ಯಂ’ ಸಿನಿಮಾದಲ್ಲಿ ನಟಿಸಲು ಶ್ರೀಲೇಖ ಮಿತ್ರ ಕೊಚ್ಚಿಗೆ ಹೋಗಿದ್ದರಂತೆ. ಅವರೇ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರಂತೆ. ಮೊದಲಿಗೆ ನಿರ್ದೇಶಕ ರಂಜಿತ್ ಅನ್ನು ಭೇಟಿ ಆದಾಗ ಅವರೊಬ್ಬ ಒಳ್ಳೆಯ, ಜ್ಞಾನವಂತ ವ್ಯಕ್ತಿ ಎನಿಸಿತಂತೆ. ಅದೇ ದಿನ ಸಂಜೆ ಹೋಟೆಲ್ ಒಂದರಲ್ಲಿ ಸಿನಿಮಾದ ಇತರೆ ತಂತ್ರಜ್ಞರು ಹಾಗೂ ನಿರ್ಮಾಪಕರೊಟ್ಟಿಗೆ ಸಭೆ ಏರ್ಪಾಟಾಗಿತ್ತಂತೆ. ಆ ಸಭೆಗೆ ರಂಜಿತ್ ಸಹ ಬಂದಿದ್ದರಂತೆ. ಅದೇ ಹೋಟೆಲ್ನಲ್ಲಿ ನಟಿ ಶ್ರೀಲೇಖ ಮಿತ್ರಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತಂತೆ.
ರಂಜಿತ್, ಸಿನಿಮಾಟೊಗ್ರಾಫರ್ ಒಬ್ಬರೊಟ್ಟಿಗೆ ಫೋನಿನಲ್ಲಿ ಮಾತನಾಡುತ್ತಿದ್ದರಂತೆ. ಬಳಿಕ ನೀವು ಅವರೊಟ್ಟಿಗೆ ಮಾತನಾಡುತ್ತೀರ ಎಂದು ನಟಿಯನ್ನು ಕೇಳಿದ್ದಾರೆ. ನಟಿ ಮಾತನಾಡುವೆ ಎಂದಾಗ, ಇಲ್ಲಿ ಬೇಡ ಜನ ಇದ್ದಾರೆ ಒಳಗೆ ಬನ್ನಿ ಎಂದು ಒಂದು ಕಡಿಮೆ ಬೆಳಕಿರುವ ಕೋಣೆಯೊಳಗೆ ಕರೆದುಕೊಂಡು ಹೋಗಿ ಫೋನ್ ಕೊಟ್ಟರಂತೆ. ನಟಿ ಮಾತನಾಡಲು ಆರಂಭಿಸುತ್ತಿದ್ದಂತೆ, ರಂಜಿತ್, ನಟಿಯ ಬಳೆಗಳನ್ನು ಮುಟ್ಟಲು ಆರಂಭಿಸಿದರಂತೆ. ಮೊದಲಿಗೆ ನಟಿ ಕೂಡಲೇ ಪ್ರತಿಕ್ರಿಯೆ ನೀಡಿಲ್ಲ, ಬದಲಿಗೆ ತುಸು ಕಾದಿದ್ದಾರೆ. ಆ ಬಳಿಕ ರಂಜಿತ್, ನಟಿಯ ಕತ್ತು, ಕೆನ್ನೆ ಮುಟ್ಟಲು ಶುರು ಮಾಡಿದನಂತೆ. ಕೂಡಲೇ ನಟಿ ಶ್ರೀಲೇಖ ಅಲ್ಲಿಂದ ಹೊರಗೆ ನಡೆದಿದ್ದಾರೆ. ನಿರ್ಮಾಪಕರ ಬಳಿ ವಿಷಯ ಹೇಳಿ, ತಾವು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.
ಘಟನೆ ನಡೆವ ವೇಳೆಗಾಗಲೆ ತಡವಾಗಿದ್ದ ಕಾರಣ ಆ ದಿನ ಹೋಟೆಲ್ ರೂಂನಲ್ಲಿ ಇರುವಾಗ ಶ್ರೀಲೇಖಾಗೆ ಬಹಳ ಭಯವಾಗಿತ್ತಂತೆ. ಹೋಟೆಲ್ನ ರೂಂ ಬಾಗಿಲಿಗೆ ಚೇರುಗಳನ್ನು ಅಡ್ಡ ಇಟ್ಟುಕೊಂಡು ಮಲಗಿದ್ದರಂತೆ. ಬೆಳಗಾಗುವುದನ್ನೇ ಕಾಯುತ್ತಿದ್ದ ನಟಿ. ಕೂಡಲೇ ಅಲ್ಲಿಂದ ಪಲಾಯನ ಮಾಡಿ ಕೊಲ್ಕತ್ತಕ್ಕೆ ಹೋಗಿಬಿಟ್ಟರಂತೆ. ಇದೀಗ ಹೇಮಾ ಸಮಿತಿಯ ವರದಿ ಪ್ರಕಟವಾಗಿರುವ ಬೆನ್ನಲ್ಲೆ ನಟಿ ಶ್ರೀಲೇಖ ಈ ವಿಷಯ ನೆನಪು ಮಾಡಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post