ಮಂಗಳೂರು, ಸೆ.25: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ನಡೆದ ಜನತಾ ದರ್ಶನದಲ್ಲಿ ಒಟ್ಟು 366 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವುಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದ ಪುರಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಅರ್ಜಿಗಳಿಗೆ ಸಕಾಲಕ್ಕೆ ಪರಿಹಾರ ನೀಡುವ ಮೂಲಕ ಜನರಿಗೆ ಸ್ಪಂದಿಸಬೇಕು. ಆಗ ಮಾತ್ರ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ ಎನ್ನುವ ಭಾವನೆ ಬರುತ್ತದೆ, ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಚಿವರು ಸಭೆಯ ಬಳಿಕ ಕಿವಿಮಾತು ಹೇಳಿದರು.
ಸ್ವೀಕರಿಸಲಾದ ಎಲ್ಲಾ 366 ಅರ್ಜಿಗಳಿಗೆ ಯಾವ ಕ್ರಮವಹಿಸಬೇಕೆಂಬುದನ್ನು ಅರ್ಜಿ ಮೇಲೆ ನಮೂದಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಜನತಾ ದರ್ಶನ ಮಾಡಲಾಗುವುದು, ಇದರ ಮುಖ್ಯ ಉದ್ದೇಶ ಸಾರ್ವಜನಿಕರಿಗೆ ಆಗಬೇಕಾದ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡುವುದು ಹಾಗೂ ಅವರ ಕಾನೂನು ಬದ್ದ ಬೇಡಿಕೆಯನ್ನು ಈಡೇರಿಸುವುದಾಗಿದೆ, ಇಲ್ಲಿ ವಿಳಂಬ ಆಗಬಾರದು, ಜನರ ಕೆಲಸ ಕಾರ್ಯಗಳಿಗೆ ಅವರನ್ನು ವೃಥಾ ಓಡಾಡಿಸಬಾರದು, ಜನರಿಗೆ ಕಿರುಕುಳ, ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದರು.
ಮುಖ್ಯಮಂತ್ರಿಗಳು ಈ ಜನ ಸ್ಪಂದನ ಕಾರ್ಯಕ್ರಮವನ್ನು ಇಡೀ ವರ್ಷದ ಕಾರ್ಯಕ್ರಮವಾಗಿ ತೆಗೆದುಕೊಂಡಿದ್ದು, ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಯತ್ನಿಸಿದ್ದಾರೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳುನುತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ವಿಧಾನ ಸಭಾ ಸದಸ್ಯರಾದ ಅಶೋಕ್ ಕುಮಾರ್‌ರೈ, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಡಿಸಿ ಮುಲ್ಲೈ ಮುಗಿಲನ್,ಜಿ.ಪಂ. ಸಿಇಒ ಡಾ. ಆನಂದ್, ನಗರ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್, ಎಸ್ಪಿ ರಿಷ್ಯಂತ್ ಸಿ.ಬಿ., ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನೂರಾರು ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.
Discussion about this post